ಬೆಂಗಳೂರು: ರಾಜಧಾನಿಯ ಜನರಿಗೆ ಪೂರೈಕೆಯಾಗುತ್ತಿರುವ ತರಕಾರಿ, ಸೊಪ್ಪು ಮಾತ್ರವಲ್ಲದೆ ಹಾಲು ಮತ್ತು ಮೊಟ್ಟೆಗಳಲ್ಲೂ ಸೀಸ (Lead) ಸೇರಿದಂತೆ ಅಪಾಯಕಾರಿ ಲೋಹದ ಅಂಶಗಳು ಪತ್ತೆಯಾಗಿರುವುದು ವಿಧಾನಸಭೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಯಿತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇದನ್ನು ತಡೆಗಟ್ಟಲು ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಎಲ್ಲಾ ಜನಪ್ರತಿನಿಧಿಗಳ ತುರ್ತು ಸಭೆ ಕರೆಯಲು ನಿರ್ಧರಿಸಿದೆ.
ಗುರುವಾರ ವಿಧಾನಸಭೆಯಲ್ಲಿ ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಪೂರಕವಾಗಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, “ಕೇವಲ ತರಕಾರಿ ಮಾತ್ರವಲ್ಲ, ಹಾಲಿನಲ್ಲೂ ಸೀಸದ ಅಂಶ ಕಂಡುಬಂದಿದೆ. ಮೊಟ್ಟೆಗಳಲ್ಲೂ ಹಾನಿಕಾರಕ ಅಂಶಗಳಿವೆ. ಸುಶಿಕ್ಷಿತರು ತರಕಾರಿಗಳನ್ನು ಉಪ್ಪು ನೀರಿನಲ್ಲಿ ತೊಳೆದು ಬಳಸುತ್ತಾರೆ. ಆದರೆ ಬೀದಿ ಬದಿ ಆಹಾರ ತಯಾರಕರು ತರಕಾರಿಗಳನ್ನು ತೊಳೆಯದೆಯೇ ಬಳಸುವುದರಿಂದ ಸಾಮಾನ್ಯ ಜನರ ಆರೋಗ್ಯಕ್ಕೆ ದೊಡ್ಡ ಕಂಟಕ ಎದುರಾಗಿದೆ. ನಗರದ ಒಂದೂವರೆ ಕೋಟಿ ಜನರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ,” ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರದ ಸ್ಪಂದನೆ:
ವಿಪಕ್ಷಗಳ ಆತಂಕಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ ಖರ್ಗೆ, “ಸರ್ಕಾರ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿದೆ. ಕಲುಷಿತ ನೀರು ಮತ್ತು ಪರಿಸರ ಮಾಲಿನ್ಯದಿಂದ ಉಂಟಾಗುತ್ತಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಎಲ್ಲಾ ಶಾಸಕರು ಮತ್ತು ಜನಪ್ರತಿನಿಧಿಗಳ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು,” ಎಂದು ಭರವಸೆ ನೀಡಿದರು.
ವಿಶೇಷ ಸಮಿತಿ ರಚನೆ:
ಇದಕ್ಕೂ ಮುನ್ನ ಉತ್ತರಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, “ತರಕಾರಿಗಳಲ್ಲಿ ನಿಗದಿತ ಪ್ರಮಾಣಕ್ಕಿಂತ 20 ಪಟ್ಟು ಹೆಚ್ಚು ವಿಷಕಾರಿ ಅಂಶವಿರುವುದು ನಿಜ. ಇದನ್ನು ತಡೆಗಟ್ಟಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ಮುಂದಿನ ವಾರವೇ ರಚಿಸಲಾಗುವುದು. ಈ ಸಮಿತಿಯು ಅತಿ ಶೀಘ್ರದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದೆ,” ಎಂದರು.

