Fri. Mar 13th, 2026

ಬಿಡದಿಯ ‘ವಂಡರ್ಲಾ’ ರೆಸಾರ್ಟ್‌ನಲ್ಲಿ ಒಡಿಸ್ಸಾ ಶಾಸಕರ ವಾಸ್ತವ್ಯ: ‘ಕೈ’ ನಾಯಕರ ಕೋಟೆ ಕಾಯಲು ನಿಂತ ಡಿ.ಕೆ. ಶಿವಕುಮಾರ್!

Share this with Friends

ಬೆಂಗಳೂರು: ಒಡಿಸ್ಸಾದಲ್ಲಿ ನಡೆಯಲಿರುವ ರಾಜ್ಯಸಭೆ ಚುನಾವಣೆಯ ಕಾವು ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನತ್ತ ಹೊರಳಿದೆ. ಕುದುರೆ ವ್ಯಾಪಾರದ ಭೀತಿಯಿಂದಾಗಿ ಒಡಿಸ್ಸಾದ ಎಂಟು ಮಂದಿ ಕಾಂಗ್ರೆಸ್ ಶಾಸಕರು ಬಿಡದಿಯ ‘ವಂಡರ್ಲಾ’ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದು, ಅವರಿಗೆ ಕರ್ನಾಟಕದ ‘ಟ್ರಬಲ್ ಶೂಟರ್’ ಡಿ.ಕೆ. ಶಿವಕುಮಾರ್ ರಕ್ಷಾ ಕವಚವಾಗಿ ನಿಂತಿದ್ದಾರೆ.

ಒಡಿಸ್ಸಾದಲ್ಲಿ ಒಟ್ಟು 147 ವಿಧಾನಸಭಾ ಕ್ಷೇತ್ರಗಳಿದ್ದು, 4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಐವರು ಅಭ್ಯರ್ಥಿಗಳು ಕಣದಲ್ಲಿದ್ದು, ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 30 ಮತಗಳ ಅಗತ್ಯವಿದೆ. ಕಾಂಗ್ರೆಸ್ ಮತ್ತು ಬಿಜು ಜನತಾ ದಳ (ಬಿಜೆಡಿ) ಜಂಟಿಯಾಗಿ ಖ್ಯಾತ ಯೂರಾಲಾಜಿಸ್ಟ್ ಡಾ. ದತ್ತೇಶ್ವರ್ ಹೋಟ ಅವರನ್ನು ಕಣಕ್ಕಿಳಿಸಿವೆ. ಮೈತ್ರಿ ಬಳಿ ಸದ್ಯ 32 ಮತಗಳಿದ್ದು (ಬಿಜೆಡಿ-18, ಕಾಂಗ್ರೆಸ್-14, ಸಿಪಿಐಎಂ-1), ಗೆಲುವಿನ ಅಂತರ ಬಹಳ ಕಡಿಮೆ ಇರುವುದು ಆತಂಕಕ್ಕೆ ಕಾರಣವಾಗಿದೆ.

ಮೊದಲ ಬಾರಿ ಗೆದ್ದವರೇ ಟಾರ್ಗೆಟ್:

ಈ ಬಾರಿಯ ಚುನಾವಣೆಯಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಎಂಟು ಮಂದಿ ಕಾಂಗ್ರೆಸ್ ಶಾಸಕರನ್ನು ವಿರೋಧಿಗಳು ಸೆಳೆಯುವ ಸಾಧ್ಯತೆ ಇದೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ, ಅವರನ್ನು ತಕ್ಷಣವೇ ಬೆಂಗಳೂರಿಗೆ ರವಾನಿಸಲಾಗಿದೆ.

ಬಿಡದಿಯಲ್ಲಿರುವ ಶಾಸಕರು: ರಾಜನ್ ಎಕ್ಕ, ಅಶೋಕ್ ದಾಸ್, ಅಪ್ಪಲ ಕುಮಾರ್ ಸ್ವಾಮಿ, ಮಂಗು ಕಿಲ್ಲೋ, ಪವಿತ್ರ ಸೌಂತಾ, ನೀಲಮಾಧವ್ ಹಿಕ್ಕ ಮತ್ತು ಪ್ರಫುಲ್ಲ ಪ್ರಧಾನ್.

ಡಿಕೆಶಿ ಎಂಟ್ರಿ – ಶಾಸಕರಲ್ಲಿ ಹೊಸ ಚೈತನ್ಯ:

ರೆಸಾರ್ಟ್‌ಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಶಾಸಕರಿಗೆ ಯಾವುದೇ ರೀತಿಯ ಆಮಿಷ ಅಥವಾ ಬೆದರಿಕೆಗಳಿಗೆ ಮಣಿಯದಂತೆ ಅಭಯ ನೀಡಿದ ಅವರು, ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. “ನಮ್ಮ ಅತಿಥಿಗಳಾಗಿ ಬಂದಿರುವ ಶಾಸಕರ ರಕ್ಷಣೆ ನಮ್ಮ ಜವಾಬ್ದಾರಿ” ಎಂದು ಡಿಕೆಶಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಬಿಜೆಪಿ ನಡೆ ಮೇಲೆ ಕಣ್ಣು:

ಬಿಜೆಪಿ ಈಗಾಗಲೇ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಮೈತ್ರಿ ಅಭ್ಯರ್ಥಿಯನ್ನು ಸೋಲಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಆದರೆ ಕಾಂಗ್ರೆಸ್ ತನ್ನ ಶಾಸಕರನ್ನು ಕರ್ನಾಟಕದ ಸುರಕ್ಷಿತ ಕೋಟೆಯಲ್ಲಿರಿಸುವ ಮೂಲಕ ಬಿಜೆಪಿಯ ‘ಆಪರೇಷನ್’ ತಂತ್ರಕ್ಕೆ ಪ್ರತಿ ತಂತ್ರ ಹೂಡಿದೆ. ಒಡಿಸ್ಸಾದ ಈ ರಾಜಕೀಯ ಹಗ್ಗಜಗ್ಗಾಟ ಬಿಡದಿಯ ರೆಸಾರ್ಟ್‌ನಿಂದ ಭುವನೇಶ್ವರದ ವಿಧಾನಸಭೆಯವರೆಗೆ ತಲುಪಿದ್ದು, ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.


Share this with Friends

Related Post