ಮೈಸೂರು ಮಾ.6: ಲೋಕಸಭಾ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಬೇಕೆಂದು ಮೈಸೂರು,ಮಂಡ್ಯ ಜಲ್ಲಾಧಿಕಾರಿಗಳು ಮನವಿ ಮಾಡಿದರು.
ಚುನಾವಣೆಯಲ್ಲಿ ಯಾವುದೇ ಲೋಪವಾಗದಂತೆ ಅಧಿಕಾರಿಗಳು ತಮಗೆ ವಹಿಸಿದ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ.ವಿ.ರಾಜೇಂದ್ರ ಹಾಗೂ ಮಂಡ್ಯ ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.
ಕೆ.ಆರ್.ನಗರ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ -2024 ರ ಸಂಬoಧ ಪೂರ್ವ ಸಿದ್ಧತಾ ಸಭೆಯಲ್ಲಿ ಇಬ್ಬರೂ ಜಿಲ್ಲಾಧಿಕಾರಿಗಳು ಮಾತನಾಡಿದರು.
ಎಲ್ಲ ಮತಗಟ್ಟೆಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ನ್ಯೂನತೆಗಳಿದ್ದಲ್ಲಿ ಸರಿಪಡಿಸುವಂತೆ ಎಲ್ಲಾ ಸೆಕ್ಟರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಅದಕ್ಕೆ ಸಂಬoಧಿಸಿದ ನಮೂನೆಗಳಾದ ವಿಎಂ1, ವಿಎಂ2, ವಿಎಂ3 ಭರ್ತಿ ಮಾಡುವ ಬಗ್ಗೆ ಆರಕ್ಷಕ ಇಲಾಖೆ, ಬಿಎಲ್‌ಒಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಭರ್ತಿ ಮಾಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂತರ ಜಿಲ್ಲಾ ಗಡಿಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣ ಅದರ ನಿಯಮಗಳಂತೆ ಚೆಕ್ ಪೋಸ್ಟ್ ನಿರ್ಮಿಸಿ ಅಲ್ಲಿನ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಟ್ಟು ವಾಹನ ತಪಾಸಣೆ ಮಾಡುವಂತೆ ಆದೇಶಿಸಿದರು.
ವಿವಿಧ ಇಲಾಖೆಗಳ ಸಮನ್ವಯತೆ ಸೆಕ್ಟರ್ ಆಫೀಸರ್‌ಗಳ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅತಿ ಮುಖ್ಯವಾಗಿ ಅರಿಯಬೇಕು. ಎಲ್ಲಾ ಅಧಿಕಾರಿಗಳು ಸೆಕ್ಟರ್ ಅಧಿಕಾರಿಗಳ ಕೈಪಿಡಿ, ಇವಿಎಂ ಅಧಿಕಾರಿಗಳ ಕೈಪಿಡಿ ಹಾಗೂ ಚುನಾವಣಾ ಆಯೋಗದಿಂದ ಬರುವ ಎಲ್ಲಾ ಕೈಪಿಡಿ ಮತ್ತು ಸುತ್ತೋಲೆಗಳಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಸಾರ್ವಜನಿಕ ಪ್ರದೇಶಗಳಿಂದ ನಿಗದಿತ ಅವಧಿಯಲ್ಲಿ ತೆರವುಗೊಳಿಸಿ ಹಾಗೂ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂಬ ಪಟ್ಟಿಯನ್ನು ತಯಾರಿಸಿ ವರದಿ ಪರಿಶೀಲಿಸಿ ಎಂದು ಡಿಸಿಗಳು ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಎಆರ್‌ಒ ಸುಪ್ರಿಯಾ ಬಣಗಾರ್, ಕೆ.ಆರ್ ನಗರ ಮತ್ತು ಸಾಲಿಗ್ರಾಮದ ತಹಶಿಲ್ದಾರ್ ಹಾಗೂ ಕಾರ್ಯ ನಿರ್ವಾಹಣಾಧಿಕಾರಿ ಉಪಸ್ಥಿತರಿದ್ದರು.