Sun. Mar 15th, 2026

ಸಿದ್ದರಾಮಯ್ಯ ‘ಔಟ್ ಗೋಯಿಂಗ್’ ಸಿಎಂ; ರಾಜೀನಾಮೆಗೆ ಸಿದ್ಧರಾಗಲಿ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

Share this with Friends

ಬೆಂಗಳೂರು: “ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಗಮನಾರ್ಹ ಸಾಧನೆ ಮಾಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ‘ಔಟ್ ಗೋಯಿಂಗ್ ಸಿಎಂ’. ಅವರು ಶೀಘ್ರದಲ್ಲೇ ರಾಜೀನಾಮೆ ನೀಡಿ ಮನೆಗೆ ಹೋಗುವುದು ಖಚಿತ,” ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಲೇವಡಿ ಮಾಡಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.

ವಂಶಪಾರಂಪರ್ಯ ರಾಜಕಾರಣದ ಮೋಹ:

“ಸಿದ್ದರಾಮಯ್ಯ ಅವರಿಗೆ ರಾಜಕೀಯವೇ ಜೀವನವಾಗಿತ್ತು. ಆದರೆ ತಮಗೆ ರಾಜಕೀಯ ಜನ್ಮ ನೀಡಿದ ಈ ರಾಜ್ಯದ ಜನರಿಗೆ ಅವರು ಮಾಡಿದ್ದೇನು? ಈಗ ತಮ್ಮ ರಾಜಕೀಯ ಅಂತ್ಯದ ದಿನಗಳು ಹತ್ತಿರ ಬರುತ್ತಿದ್ದಂತೆ ಮಗ ಯತೀಂದ್ರರನ್ನು ಆಶೀರ್ವದಿಸಿ ಎಂದು ಜನರ ಮುಂದೆ ಅಂಗಲಾಚುತ್ತಿದ್ದಾರೆ. ರಾಜ್ಯದ ಜನರ ಹಿತ ಕಾಯುವುದನ್ನು ಬಿಟ್ಟು, ಕೇವಲ ಮಗನ ರಕ್ಷಣೆಗಾಗಿ ವಂಶಪಾರಂಪರ್ಯ ರಾಜಕಾರಣಕ್ಕೆ ಅವರು ಜೋತು ಬಿದ್ದಿರುವುದು ದುರದೃಷ್ಟಕರ,” ಎಂದು ಟೀಕಿಸಿದರು.

ವೈರಾಗ್ಯದ ಮಾತುಗಳು:

“ಹಿಂದೆಲ್ಲಾ ತಾನೇ ಐದು ವರ್ಷ ಸಿಎಂ ಆಗಿರುತ್ತೇನೆ ಎಂದು ಎದೆತಟ್ಟಿ ಹೇಳುತ್ತಿದ್ದ ಸಿದ್ದರಾಮಯ್ಯ ಅವರಿಗೆ ಈಗ ಆ ತಾಖತ್ತಿಲ್ಲ. ಅವರಲ್ಲಿ ಈಗ ವೈರಾಗ್ಯದ ಮಾತುಗಳು ಸುರುವಾಗಿವೆ. ನನ್ನ ಕಾಲ ಮುಗಿಯಿತು, ಮಗನನ್ನು ಕಾಪಾಡಿ ಎನ್ನುವ ಅವರ ಮಾತುಗಳೇ ಅವರು ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆ ನೀಡುತ್ತಿವೆ,” ಎಂದರು.

ರಾಜೀನಾಮೆ ಸನ್ನಿಹಿತ:

ರಾಜ್ಯಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ ಅವರು ತಮ್ಮ ಸ್ಥಾನ ಕಳೆದುಕೊಳ್ಳಲಿದ್ದಾರೆ. ಶೀಘ್ರದಲ್ಲೇ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಿಸಾಕಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ನಾರಾಯಣಸ್ವಾಮಿ ಭವಿಷ್ಯ ನುಡಿದರು

ಅರಸು ಅವರ ಕೊಡುಗೆಗಳ ದಾಖಲೆ ಮುರಿಯಲು ಸಿದ್ದರಾಮಯ್ಯ ಅಸಾಧ್ಯ:  “ರಾಜ್ಯದ ಶ್ರೇಷ್ಠ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರ ಆಡಳಿತಾವಧಿಯ ದಾಖಲೆ ಮುರಿದೆ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಅವರು ಅರಸು ಅವರ ಅಧಿಕಾರಾವಧಿಯ ದಿನಗಳ ದಾಖಲೆ ಮುರಿದಿರಬಹುದು, ಆದರೆ ಅವರ ಜನಪರ ಕೊಡುಗೆಗಳ ದಾಖಲೆ ಮುರಿಯಲು ಸಿದ್ದರಾಮಯ್ಯ ಅವರಿಗೆ ಸಾಧ್ಯವಿಲ್ಲ,” ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

ದಲಿತ ವಿರೋಧಿ ಧೋರಣೆ:

“ಸಿದ್ದರಾಮಯ್ಯ ಅವರು ಶುದ್ಧ ದಲಿತ ವಿರೋಧಿ. ದಲಿತ ಸಮುದಾಯಕ್ಕೆ ಸೇರಬೇಕಾದ ಎಸ್‌ಸಿಪಿ/ಟಿಎಸ್‌ಪಿ (SCP/TSP) ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸುವ ಮೂಲಕ ಸಮುದಾಯಕ್ಕೆ ಅನ್ಯಾಯ ಎಸಗಿದ್ದಾರೆ. ಸ್ವಪಕ್ಷದ ಶಾಸಕರೇ ವಿರೋಧಿಸಿದರೂ ಸುಮಾರು 15 ಸಾವಿರ ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇಷ್ಟು ವರ್ಷ ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡ ಇವರು, ದಲಿತರು ಮುಖ್ಯಮಂತ್ರಿಯಾಗುವ ಅವಕಾಶಗಳನ್ನೆಲ್ಲ ಕಸಿದುಕೊಂಡಿದ್ದಾರೆ,” ಎಂದು ಗಂಭೀರವಾಗಿ ಆರೋಪಿಸಿದರು.

ಬಜೆಟ್ ಕೇವಲ ಅಂಕಿ-ಅಂಶ:

“ಸಿದ್ದರಾಮಯ್ಯ 17 ಬಜೆಟ್ ಮಂಡಿಸಿರುವುದು ಕೇವಲ ದಾಖಲೆಗಾಗಿ ಮಾತ್ರ. ಇದರಿಂದ ರಾಜ್ಯದ ಜನರಿಗೆ ಸಿಕ್ಕ ಪ್ರಯೋಜನ ಶೂನ್ಯ. ಅರಸು ಅವರ ಆಡಳಿತದ ರೀತಿಯಲ್ಲಿ ಜನರ ಮನಸ್ಸಿನಲ್ಲಿ ಉಳಿಯುವ ಯಾವುದೇ ಶಾಶ್ವತ ಯೋಜನೆಗಳನ್ನು ಇವರು ಜಾರಿಗೆ ತಂದಿಲ್ಲ. ಒಳಮೀಸಲಾತಿ ಜಾರಿಯಲ್ಲೂ ಗೊಂದಲ ಸೃಷ್ಟಿಸಿ ಈಗ ಅಧಿಕಾರದಿಂದ ದೂರ ಸರಿಯುತ್ತಿದ್ದಾರೆ,” ಎಂದರು.

ಫ್ಲಿಪ್‌ಕಾರ್ಟ್ ಹಾಲಿನ ದರಕ್ಕೆ ಆಕ್ಷೇಪ:

ಇದೇ ವೇಳೆ ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್ (Flipkart) ಒಂದು ರೂಪಾಯಿಗೆ ಒಂದು ಲೀಟರ್ ಹಾಲು ನೀಡುವ ಜಾಹೀರಾತು ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, “ಇದು ರೈತರಿಗೆ ಮಾಡುವ ದ್ರೋಹ. ಕೇವಲ ಒಂದು ದಿನದ ಲಾಭಕ್ಕಾಗಿ ಜನರನ್ನು ವಂಚಿಸುವ ಇಂತಹ ಜಾಹೀರಾತುಗಳ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅನ್ನದಾತರ ಹಿತ ಕಾಯುವುದು ಸರ್ಕಾರದ ಆದ್ಯತೆಯಾಗಲಿ,” ಎಂದು ಆಗ್ರಹಿಸಿದರು.

 


Share this with Friends

Related Post