Tue. Mar 17th, 2026

ನೈರುತ್ಯ ರೈಲ್ವೆ ಪರೀಕ್ಷೆ ; ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!

Share this with Friends

ಬೆಂಗಳೂರು: ನೈರುತ್ಯ ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿರುವ ವಿಚಾರ ಈಗ ರಾಜ್ಯ ಸರ್ಕಾರದ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕನ್ನಡಿಗ ಉದ್ಯೋಗಿಗಳು ಹಾಗೂ ಕನ್ನಡ ಸಂಘಟನೆಗಳ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಎರಡು ಪ್ರಮುಖ ಪರೀಕ್ಷೆಗಳನ್ನು ರೈಲ್ವೆ ಇಲಾಖೆ ದಿಢೀರನೇ ರದ್ದುಗೊಳಿಸಿದೆ. ಈ ಬೆಳವಣಿಗೆಯನ್ನು “ಕೇಂದ್ರದ ಭಾಷಾ ದಬ್ಬಾಳಿಕೆ” ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೈರುತ್ಯ ರೈಲ್ವೆ ವ್ಯಾಪ್ತಿಯ 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದ ಎಲ್‌ಡಿಸಿಇ (LDCE) ವಿಭಾಗದ 101 ಹುದ್ದೆಗಳಿಗೆ ಮುಂಬಡ್ತಿ ನೀಡುವ ಪರೀಕ್ಷೆಗಳು ಇಂದು ನಿಗದಿಯಾಗಿದ್ದವು. ಆದರೆ, ಈ ಪರೀಕ್ಷೆಗಳನ್ನು ಕೇವಲ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ನಡೆಸಲು ಇಲಾಖೆ ತೀರ್ಮಾನಿಸಿತ್ತು. ಇದನ್ನು ವಿರೋಧಿಸಿ ನೂರಾರು ಕನ್ನಡಿಗ ಉದ್ಯೋಗಿಗಳು ಪರೀಕ್ಷಾ ಕೇಂದ್ರಗಳ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಕಾವು ಹೆಚ್ಚಾದಂತೆ ಎಚ್ಚೆತ್ತ ರೈಲ್ವೆ ಇಲಾಖೆ, ಕೊನೆ ಕ್ಷಣದಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಟ್ವೀಟ್ ಮೂಲಕ ಸಿಎಂ ಕಿಡಿ:

ಈ ಕುರಿತು ಸುದೀರ್ಘ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ‘ಹಿಂದಿ ಹೇರಿಕೆ’ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ. “ಕನ್ನಡಿಗರಿಗೆ ಕೇಂದ್ರದ ಪರೀಕ್ಷೆಗಳಲ್ಲಿ ಅನ್ಯಾಯವಾಗುತ್ತಿರುವುದು ಇದು ಮೊದಲಲ್ಲ. ಹಿಂದಿ ಭಾಷಿಗರಿಗೆ ನೆರವಾಗಲೆಂದೇ ರಾಜ್ಯ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ. ಇದು ಒಕ್ಕೂಟ ವ್ಯವಸ್ಥೆಗೆ ಮಾಡುವ ಅವಮಾನ” ಎಂದು ಅವರು ಗುಡುಗಿದ್ದಾರೆ.

ಸಚಿವ ಸೋಮಣ್ಣಗೆ ನೇರ ಟಾಂಗ್:

ವಿಶೇಷವಾಗಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ನಡೆಯನ್ನು ಸಿಎಂ ಪ್ರಶ್ನಿಸಿದ್ದಾರೆ. “ಸೋಮಣ್ಣನವರು ಕನ್ನಡಿಗರ ಪರ ನಿಲ್ಲುತ್ತಾರೆ ಎಂಬ ನಂಬಿಕೆ ಹುಸಿಯಾಗಿದೆ. ಅವರು ಮಾತಿನ ಅರಮನೆ ಕಟ್ಟುವುದನ್ನು ಬಿಟ್ಟು, ಕರ್ನಾಟಕಕ್ಕಾಗಿ ಕೆಲಸ ಮಾಡಲಿ. ಆಳುವ ಪಕ್ಷದ ಸಂಸದರು ಪಕ್ಷದ ಮುಲಾಜಿಗೆ ಬಿದ್ದು ಬಾಯಿ ಮುಚ್ಚಿಕೊಂಡಿರಬಹುದು, ಆದರೆ ಕನ್ನಡಿಗರು ಜಾಗೃತರಾಗಿದ್ದಾರೆ” ಎಂದು ಪರೋಕ್ಷವಾಗಿ ಬಿಜೆಪಿ ಸಂಸದರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಧಾನಿ ಹಸ್ತಕ್ಷೇಪಕ್ಕೆ ಆಗ್ರಹ:

“ಕನ್ನಡಿಗರು ಉದ್ಯೋಗಕ್ಕಾಗಿ ಭಿಕ್ಷೆ ಬೇಡುತ್ತಿಲ್ಲ, ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ” ಎಂದಿರುವ ಸಿಎಂ, ಪ್ರಧಾನಿ ನರೇಂದ್ರ ಮೋದಿ ಅವರು ಈ ಕೂಡಲೇ ಮಧ್ಯಪ್ರವೇಶಿಸಿ, ರದ್ದಾಗಿರುವ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ನೀಡಿ ಮರುಪರೀಕ್ಷೆ ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

 


Share this with Friends

Related Post