Wed. Mar 18th, 2026

ಜಿಬಿಎ ಚುನಾವಣೆ: ಮತದಾರರ ಪಟ್ಟಿ ಆಕ್ಷೇಪಣೆಗೆ ಕಾಲಾವಕಾಶ ವಿಸ್ತರಿಸಲು ಆರ್. ಅಶೋಕ್ ಒತ್ತಾಯ

Share this with Friends

ಬೆಂಗಳೂರು: ಜಿಬಿಎ ಚುನಾವಣೆಯ ಕರಡು ಮತದಾರರ ಪಟ್ಟಿಯ ಪರಿಶೀಲನೆ ಮತ್ತು ಆಕ್ಷೇಪಣೆ ಸಲ್ಲಿಸಲು ನಿಗದಿಪಡಿಸಿರುವ ಸಮಯವನ್ನು ಮಾರ್ಚ್ 30ರವರೆಗೆ ವಿಸ್ತರಿಸಬೇಕೆಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ರಾಜ್ಯ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.

ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿದ ಅಶೋಕ್ ನೇತೃತ್ವದ ಬಿಜೆಪಿ ನಿಯೋಗ, ಕಳೆದ ಕೆಲವು ದಿನಗಳಿಂದ ಎದುರಾಗಿರುವ ತಾಂತ್ರಿಕ ಮತ್ತು ಪ್ರಾಯೋಗಿಕ ಸಮಸ್ಯೆಗಳನ್ನು ಎತ್ತಿ ತೋರಿಸಿತು.

ಈ ವೇಳೆ ಮಾತನಾಡಿದ ಅಶೋಕ್,”ಮತದಾರರ ಪಟ್ಟಿ ಪರಿಶೀಲನೆಯ ವೆಬ್‌ಸೈಟ್ ಮಾರ್ಚ್ 13ರಿಂದ 18ರವರೆಗೆ ತಾಂತ್ರಿಕ ಕಾರಣಗಳಿಂದ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಇದರಿಂದಾಗಿ ಸಾವಿರಾರು ನಾಗರಿಕರು ತಮ್ಮ ಹೆಸರುಗಳನ್ನು ಪರಿಶೀಲಿಸಲು ಸಾಧ್ಯವಾಗದೆ ಪರದಾಡುವಂತಾಗಿದೆ. ಈ ಬಗ್ಗೆ ಈಗಾಗಲೇ ಜಿಬಿಎ ಮಹಾ ಆಯುಕ್ತರಿಗೆ ಅಧಿಕೃತ ದೂರು ನೀಡಲಾಗಿದೆ,” ಎಂದು ತಿಳಿಸಿದ್ದಾರೆ.

ವಿಳಂಬವಾಗಿ ತಲುಪಿದ ಪಟ್ಟಿ:

ಕರಡು ಮತದಾರರ ಪಟ್ಟಿಯ ಪ್ರತಿಗಳು ಕಚೇರಿಗೆ ತಲುಪಲು ವಿಳಂಬವಾಗಿದ್ದು, ಮಾರ್ಚ್ 16ರಂದು ಕೈಸೇರಿವೆ. ಇಷ್ಟು ದೊಡ್ಡ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಲು ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಹಬ್ಬದ ರಜೆಗಳ ಹಿನ್ನೆಲೆ:

“ಮುಂದಿನ ಮೂರು ದಿನಗಳ ಕಾಲ ಸರಣಿ ಹಬ್ಬದ ರಜೆಗಳಿರುವುದರಿಂದ ಜನರು ತಮ್ಮ ಊರುಗಳಿಗೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ ಆಕ್ಷೇಪಣೆ ಸಲ್ಲಿಸಲು ಕೇವಲ ಮಾರ್ಚ್ 20ರವರೆಗೆ ಸಮಯ ನೀಡುವುದು ಸರಿಯಲ್ಲ. ಮತದಾರರ ಹಿತದೃಷ್ಟಿಯಿಂದ ಈ ಅವಧಿಯನ್ನು ಮಾರ್ಚ್ 30ರವರೆಗೆ ವಿಸ್ತರಿಸಬೇಕು,” ಎಂದು ಅಶೋಕ್ ಅವರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ಮತ್ತು ಪಾರದರ್ಶಕ ಚುನಾವಣೆ ನಡೆಸಲು ಈ ಕ್ರಮ ಅನಿವಾರ್ಯ ಎಂದು ಅವರು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

 


Share this with Friends

Related Post