ಬೆಂಗಳೂರು: ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಅಧಿಸೂಚನೆ (ನೋಟಿಫಿಕೇಷನ್) ಹೊರಡಿಸಲು ಯಾವುದೇ ಕಾನೂನು ಅಡೆತಡೆಗಳಿಲ್ಲ ಹಾಗೂ ನ್ಯಾಯಾಲಯದ ತಡೆಯಾಜ್ಞೆಯೂ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ದೆಹಲಿ ಪ್ರವಾಸ ಮುಗಿಸಿ ನಗರಕ್ಕೆ ಮರಳಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಕಾನೂನು ತಜ್ಞರು ಮತ್ತು ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸಲಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ಹಸಿರು ನಿಶಾನೆ ಸಿಕ್ಕಿದೆ. ಈ ಕುರಿತು ರಾಜ್ಯ ಸರ್ಕಾರ ಶೀಘ್ರದಲ್ಲೇ ಮಹತ್ವದ ತೀರ್ಮಾನ ಕೈಗೊಳ್ಳಲಿದೆ” ಎಂದರು.
ದೆಹಲಿಯಲ್ಲಿ ಸಂಸದರ ಸಭೆ:
ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ದೆಹಲಿಯಲ್ಲಿ ಕರ್ನಾಟಕದ ಸಂಸದರ ಸಭೆ ನಡೆಸಲಾಗಿದೆ. ಜೆಡಿಎಸ್ ಹೊರತುಪಡಿಸಿ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ಸೇರಿದಂತೆ ಒಟ್ಟು 24 ಸಂಸದರು ಭಾಗವಹಿಸಿದ್ದರು. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಕೇಂದ್ರದಿಂದ ಆಗಬೇಕಿರುವ ಕೆಲಸಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ.”ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಹಿರಿಯ ನಾಯಕರು ಸಭೆಯಲ್ಲಿ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಪ್ರಹ್ಲಾದ್ ಜೋಶಿ ಹಾಗೂ ವಿ.ಸೋಮಣ್ಣ ಅವರು ಅನಿವಾರ್ಯ ಕಾರಣಗಳಿಂದ ಬರಲು ಸಾಧ್ಯವಾಗಲಿಲ್ಲ. ಆದರೆ, ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ಹಾಗೂ ಕೇಂದ್ರ ಜಲಶಕ್ತಿ ಸಚಿವರನ್ನು ಸರ್ವಪಕ್ಷಗಳ ನಿಯೋಗದೊಂದಿಗೆ ಭೇಟಿ ಮಾಡಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು.
ಕಾನೂನು ಸಲಹೆ:
ಕಾನೂನು ಸಲಹೆಗಾರರಾದ ಮೋಹನ್ ಕಾತರಕಿ ಹಾಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಯೋಜನೆಯ ಮುಂದಿನ ಹಂತಗಳ ಬಗ್ಗೆ ಕೆಲವು ಪ್ರಮುಖ ಅಂಶಗಳನ್ನು ತಿಳಿಸಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲೇ ರಾಜ್ಯದಲ್ಲಿಯೂ ಸರ್ವಪಕ್ಷಗಳ ಸಭೆ ಕರೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.
ಕಟ್ಟಡಗಳ ಎತ್ತರ ಮಿತಿ ಕುರಿತು ಕೇಂದ್ರದ ಗಮನಕ್ಕೆ: “ನಮ್ಮ ರಾಜ್ಯದ ಪ್ರೀಮಿಯಂ ಎಫ್‌ಎಆರ್ (FAR) ಮತ್ತು ಕಟ್ಟಡಗಳ ಎತ್ತರದ ಮಿತಿಗೆ ಸಂಬಂಧಿಸಿದ ನಿಯಮಗಳು ಹಾಗೂ ಇತರ ರಾಜ್ಯಗಳಲ್ಲಿನ ಪರಿಸ್ಥಿತಿಯನ್ನು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ. ರಕ್ಷಣಾ ಸಚಿವರನ್ನೂ ಶೀಘ್ರದಲ್ಲೇ ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಲಿದ್ದೇವೆ. ಕೇಂದ್ರದಿಂದ ಈ ಕುರಿತು ಧನಾತ್ಮಕ ಸ್ಪಂದನೆ ಸಿಕ್ಕಿದೆ” ಎಂದರು.
ಜಾಗತಿಕ ಮಾನದಂಡಗಳ ಅಧ್ಯಯನ:
“ವಿಶ್ವದ ಪ್ರಮುಖ ನಗರಗಳಲ್ಲಿ ವಿಮಾನ ನಿಲ್ದಾಣದ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿಗೆ ಸಂಬಂಧಿಸಿದಂತೆ ಯಾವ ರೀತಿಯ ಕಾನೂನುಗಳಿವೆ ಎಂಬ ಬಗ್ಗೆ ಕೇಂದ್ರ ವಿಮಾನಯಾನ ಸಂಸ್ಥೆಯು ವರದಿ ಸಿದ್ಧಪಡಿಸಿದೆ. ಈ ಜಾಗತಿಕ ಮಾನದಂಡಗಳ ವರದಿಯನ್ನು ತರಿಸಿಕೊಂಡು ಅಧ್ಯಯನ ನಡೆಸಿದ ನಂತರ ನಮ್ಮ ರಾಜ್ಯದಲ್ಲೂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಅವರು ತಿಳಿಸಿದರು.
ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆ:
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಅಗತ್ಯದ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಅವರು ಈಗಾಗಲೇ ಪ್ರಸ್ತಾವನೆ ನೀಡಿದ್ದಾರೆ. ಈ ಬಗ್ಗೆ ಸಚಿವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸಚಿವ ಸಂಪುಟ (Cabinet) ಸಭೆಯ ಮುಂದಿಡಲಾಗುವುದು. ಭೂಸ್ವಾಧೀನ ಪ್ರಕ್ರಿಯೆ, ಆರ್ಥಿಕ ಸಂಪನ್ಮೂಲ ಹಾಗೂ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.
ಹೈಕಮಾಂಡ್ ತೀರ್ಮಾನವೇ ಅಂತಿಮ:
ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬಿಜೆಪಿ ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿರುವ ಬೆನ್ನಲ್ಲೇ ಕಾಂಗ್ರೆಸ್ ತಂತ್ರಗಾರಿಕೆಯ ಬಗ್ಗೆ ಮಾತನಾಡಿದ ಅವರು, “ಕಳೆದ ಎರಡು ತಿಂಗಳಿನಿಂದ ಬೂತ್ ಮಟ್ಟದಿಂದ ವರದಿಗಳನ್ನು ತರಿಸಿಕೊಳ್ಳಲಾಗಿದೆ. ಎಐಸಿಸಿ ಕಾರ್ಯದರ್ಶಿಗಳು ಶೀಘ್ರದಲ್ಲೇ ರಾಜ್ಯಕ್ಕೆ ಭೇಟಿ ನೀಡಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ನಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ಸಲ್ಲಿಸಲಾಗುವುದು. ಅದರಂತೆ ಬಿ-ಫಾರಂ ವಿತರಣೆಯಾಗಲಿದೆ” ಎಂದರು.
ಪಕ್ಷವೇ ಮೊದಲು, ಕುಟುಂಬವಲ್ಲ:
ಟಿಕೆಟ್ ಹಂಚಿಕೆಯಲ್ಲಿ ಕುಟುಂಬದ ಸದಸ್ಯರಿಗೆ ಆದ್ಯತೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, “ಇಲ್ಲಿ ಕುಟುಂಬ ಮುಖ್ಯವಲ್ಲ, ಪಕ್ಷದ ಗೆಲುವು ಮುಖ್ಯ. ಪ್ರಮುಖ ಮುಖಂಡರ ಕ್ಷೇತ್ರಗಳಾಗಿರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ತೀರ್ಮಾನಿಸಲಾಗುವುದು. ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದ ವೀರಶೈವ ಮಹಾಸಭಾ ಹಾಗೂ ಅಲ್ಪಸಂಖ್ಯಾತ ಸಮುದಾಯದ ಬೆಂಬಲ ನಮಗಿದೆ. ಕಳೆದ ಬಾರಿ ಟಿಕೆಟ್ ವಂಚಿತರಾದವರಿಗೂ ಸೂಕ್ತ ಸ್ಥಾನಮಾನ ನೀಡಲಾಗಿದೆ. ವೈಯಕ್ತಿಕ ಅಭಿಪ್ರಾಯಕ್ಕಿಂತ ಕಾರ್ಯಕರ್ತರ ಮತ್ತು ಸಮೀಕ್ಷಾ ವರದಿಗಳ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆಯಾಗಲಿದೆ” ಎಂದು ಸ್ಪಷ್ಟಪಡಿಸಿದರು.
ಐಶ್ವರ್ಯ ಅನಂತಕುಮಾರ್ ಟೀಕೆಗೆ ತಿರುಗೇಟು:
ಕರ್ನಾಟಕವನ್ನು ‘ಕ್ಯಾಶ್ ಕೌ’ ಎಂದು ಟೀಕಿಸಿದ ದಿವಂಗತ ಅನಂತಕುಮಾರ್ ಅವರ ಪುತ್ರಿ ಐಶ್ವರ್ಯ ಅವರ ಹೇಳಿಕೆಗೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಅವರು ಯಾರೆಂದು ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲೂ ಹಸುಗಳಿವೆ, ಬಹುಶಃ ಅವರು ನಮ್ಮೂರಿನ ಹಸುಗಳನ್ನು ನೋಡಿರಬೇಕು” ಎಂದು ಟಾಂಗ್ ನೀಡಿದರು.
ಅಸ್ಸಾಂ ಚುನಾವಣೆ ಜವಾಬ್ದಾರಿ:
ಅಸ್ಸಾಂ ವಿಧಾನಸಭೆ ಚುನಾವಣೆ ಕುರಿತು ಮಾತನಾಡುತ್ತಾ, “ಅಸ್ಸಾಂ ಚುನಾವಣಾ ಪ್ರಚಾರದ ಬಗ್ಗೆ ಇಂದು ಜೂಮ್ ಮೂಲಕ ಸಭೆ ನಡೆಸಲಾಗುವುದು. ಪ್ರಚಾರದ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು” ಎಂದು ಅವರು ಮಾಹಿತಿ ನೀಡಿದರು.
“ಎಲ್ಲವನ್ನೂ ಕಾಲವೇ ನಿರ್ಣಯಿಸಲಿದೆ”:
ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸಚಿವ ಸಂಪುಟ ಪುನರ್‌ರಚನೆ ಹಾಗೂ ಅಧಿಕಾರ ಹಂಚಿಕೆಯ ವಿಷಯಗಳ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು “ಕಾಲವೇ ಎಲ್ಲವನ್ನೂ ನಿರ್ಣಯಿಸಲಿದೆ” ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಆಗ್ರಹದ ಬಗ್ಗೆ ಪ್ರತಿಕ್ರಿಯಿಸಿ, “ಮಂತ್ರಿಯಾಗಬೇಕೆಂಬ ಆಸೆ ಪಡುವುದರಲ್ಲಿ ಯಾವುದೇ ತಪ್ಪಿಲ್ಲ. ಮುಖ್ಯಮಂತ್ರಿಗಳೇ ಸಂಪುಟ ಪುನರ್‌ರಚನೆಯ ಬಗ್ಗೆ ಸುಳಿವು ನೀಡಿದ್ದಾರೆ. ಹಾಗಾಗಿ ಆಕಾಂಕ್ಷಿಗಳು ತಮ್ಮ ಪ್ರಯತ್ನ ನಡೆಸುತ್ತಿದ್ದಾರೆ,” ಎಂದರು.
ಅಧಿಕಾರ ಹಂಚಿಕೆ ಬಗ್ಗೆ ಮೌನ:
ಸಂಪುಟ ಪುನರ್‌ರಚನೆಯೋ ಅಥವಾ ಅಧಿಕಾರ ಹಂಚಿಕೆಯೋ ಎನ್ನುವ ಪ್ರಶ್ನೆಗೆ ನೇರ ಉತ್ತರ ನೀಡದ ಡಿ.ಕೆ. ಶಿವಕುಮಾರ್, “ಅದನ್ನು ಕಾಲವೇ ನಿರ್ಧರಿಸುತ್ತದೆ” ಎಂದು ಮಾರ್ಮಿಕವಾಗಿ ಉತ್ತರಿಸಿದರು. ಇದೇ ವೇಳೆ ದೆಹಲಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ನಡೆಸಿದ ಪ್ರತ್ಯೇಕ ಸಭೆಯ ವಿವರಗಳನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದರು. “ನಾನು ಯಾರ ಜೊತೆ ಏನು ಚರ್ಚಿಸಿದ್ದೇನೆ ಎಂಬ ವಿಷಯವನ್ನು ಸಾರ್ವಜನಿಕವಾಗಿ ಹೇಳಲು ಇಚ್ಛಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದರು.
ಸಿಎಂ ಹುದ್ದೆ ಖಾಲಿ ಇಲ್ಲ:
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳ ನಡುವೆ ಕೆ.ಸಿ. ವೇಣುಗೋಪಾಲ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಡಿಸಿಎಂ, “ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದು ಅವರು ಹೇಳಿರುವುದು ನಿಜ. ಅಂತಿಮವಾಗಿ ಪಕ್ಷ ಮತ್ತು ಶಾಸಕರು ತೆಗೆದುಕೊಳ್ಳುವ ತೀರ್ಮಾನವೇ ಮುಖ್ಯವಾಗುತ್ತದೆ,” ಎಂದು ತಿಳಿಸಿದರು

