Mon. Dec 23rd, 2024

ಅನಧಿಕೃತ ಹೋಮ್ ಸ್ಟೇ ಮುಚ್ಚಲು ಕ್ರಮ:ಡಾ. ಕೆ ವಿ ರಾಜೇಂದ್ರ ಎಚ್ಚರಿಕೆ

Share this with Friends

ಮೈಸೂರು.ಮಾ.7: ಜಿಲ್ಲೆಯಾದ್ಯಂತ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಮ್ ಸ್ಟೇ ಗಳನ್ನು ಮುಚ್ಚಲು ತಕ್ಷಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.

ಅಧಿಕೃತವಾಗಿ ನೊಂದಾಯಿಸಿರುವ ಹೋಮ್ ಸ್ಟೇಗಳ ಪಟ್ಟಿಯನ್ನು ಪಡೆದು,ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹೋಮ್ ಸ್ಟೇ ಗಳನ್ನು ಮುಚ್ಚಿಸುವಂತೆ ಡಾ. ಕೆ ವಿ ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅನಧಿಕೃತ ಹೋಮ್ ಸ್ಟೇ ನಿರ್ಮಾಣ ಹೆಚ್ಚಾಗುತ್ತಿದ್ದು ಅದರ ಬಗ್ಗೆ ಅಧಿಕಾರಿಗಳು ವರದಿ ಪಡೆದು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಮೈಸೂರು ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯ ಸದಸ್ಯರನ್ನಾಗಿ ನೇಮಿಸಿ, ಹಾಗೂ ನೇರ ಪಾಲುದಾರರೊಂದಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಕರೆದು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.

ಮೈಸೂರು ಪ್ರವಾಸೋದ್ಯಮವನ್ನು ಹೆಚ್ಚಾಗಿ ಪ್ರಚಾರ ಮಾಡಲು ಇಲಾಖೆಯ ವೆಬ್ ಸೈಟ್ ಪ್ರಾರಂಭಿಸಿ ಅದರಲ್ಲಿ ಸಾರ್ವಜನಿಕರಿಗೆ ಎಲ್ಲಾ ಮಾಹಿತಿ ತಿಳಿಯುವಂತೆ ಮಾಡಬೇಕು.

ಯಾವುದೇ ಹೋಟೆಲ್, ರೆಸ್ಟೋರೆಂಟ್ ಹಾಗೂ ಇತ್ಯಾದಿಗಳನ್ನು ಪ್ರಾರಂಭಿಸಲು ಗ್ರಾಮಪಂಚಾಯಿತಿ ಅಥವಾ ಕಾರ್ಪೋರೇಶನ್ ಅನುಮತಿ ನೀಡುವ ಮೊದಲು ನಿಧಿ ಪೋರ್ಟಲ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.

ಪ್ರವಾಸಿಗರನ್ನು ಸೆಳೆಯಲು ಪುಟ್ಟ ವಿಡಿಯೋಗಳ ಮೂಲಕ ಪ್ರಚಾರ ಮಾಡಬೇಕು. ಅದಕ್ಕೆ ಪ್ರಸಿದ್ಧ ಬ್ಲಾಗರ್ಸ್ ಹಾಗೂ ಛಾಯಾಚಿತ್ರಗಾರರಿಗೆ ಮೈಸೂರು ಪ್ರವಾಸಿ ತಾಣಗಳ ಬಗ್ಗೆ ಸ್ಪರ್ಧೆಯನ್ನು ಏರ್ಪಡಿಸಿ ನಗದು ಬಹುಮಾನವನ್ನು ನೀಡಬೇಕು. ಇದರಿಂದ ಬಂದ ಉತ್ತಮ ವಿಡಿಯೋ ಮತ್ತು ಫೋಟೋವನ್ನು ಆಯ್ದುಕೊಂಡು ಕಾಫಿ ಟೇಬಲ್ ಬುಕ್ ತಯಾರಿಸಬೇಕು ಎಂದು ಡಾ.ರಾಜೇಂದ್ರ ಆದೇಶಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ಬರುವಂತಹ ಪ್ರವಾಸಿಗರಿಗೆ ವಿವಿಧ ರೀತಿಯ ಪ್ಯಾಕೇಜ್ ಗಳನ್ನು ನೀಡಿ ಅವರನ್ನು ಸೆಳೆಯಬೇಕು,ಬ್ರಾಂಡ್ ಮೈಸೂರು ಲೋಗೋ ವನ್ನು ಜಿಲ್ಲೆಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಹಾಕಿ ಪ್ರಚಾರ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಕೆ. ಎಂ ಗಾಯತ್ರಿ, ಮಹಾನಗರ ಪಾಲಿಕೆ ಆಯುಕ್ತ ಡಾ ಮಧು, ಪೊಲೀಸ್ ವರಿಷ್ಟಾಧಿಕಾರಿ ಸೀಮಾ ಲಾಟ್ಕರ್, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಮತ್ತಿತರರು ಪಾಲ್ಗೊಂಡಿದ್ದರು.


Share this with Friends

Related Post