Fri. Mar 20th, 2026

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಬಿ.ವೈ. ವಿಜಯೇಂದ್ರ ಬಹಿರಂಗ ಸವಾಲು

Share this with Friends

ಕಲಬುರ್ಗಿ: “ಸಚಿವ ಪ್ರಿಯಾಂಕ್ ಖರ್ಗೆ ಅವರು ಅಂತರರಾಷ್ಟ್ರೀಯ ಮತ್ತು ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು, ಮೊದಲು ತಮ್ಮ ಹಿಡಿತದಲ್ಲಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಗಮನಹರಿಸಲಿ,” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಲೇವಡಿ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು. “ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಲ್ಯಾಣ ಕರ್ನಾಟಕಕ್ಕೆ ನೀಡಿದ ಅನುದಾನ ಮತ್ತು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ನಾನು ಈಗಾಗಲೇ ಸವಾಲು ಹಾಕಿದ್ದೇನೆ. ಶಿವಮೊಗ್ಗ ಮತ್ತು ಕಲಬುರ್ಗಿ ಜಿಲ್ಲೆಗಳ ಅಭಿವೃದ್ಧಿಯ ತುಲನೆ ಮಾಡೋಣ. ನಿಮ್ಮ ಆಡಳಿತಾವಧಿಯಲ್ಲಿ ಎಷ್ಟು ಸಾವಿರ ಕೋಟಿ ಅನುದಾನ ನೀಡಿದ್ದೀರಿ? ಎಷ್ಟು ಅಭಿವೃದ್ಧಿ ಮಾಡಿದ್ದೀರಿ? ಎಂಬ ಬಗ್ಗೆ ಜನರಿಗೆ ಉತ್ತರಿಸಿ,” ಎಂದು ಸವಾಲು ಎಸೆದರು.

ಸ್ಥಳೀಯ ಸಮಸ್ಯೆಗಳ ನಿರ್ಲಕ್ಷ್ಯ:

ಪ್ರಿಯಾಂಕ್ ಖರ್ಗೆ ಅವರು ನಿರಂತರವಾಗಿ ಅಧಿಕಾರ ಅನುಭವಿಸುತ್ತಿದ್ದರೂ, ಈ ಭಾಗದ ಬಡವರು, ಯುವಜನತೆ ಮತ್ತು ಮಹಿಳೆಯರಿಗೆ ಅದರ ಲಾಭ ಸಿಗುತ್ತಿಲ್ಲದಿರುವುದು ದುರ್ದೈವ. ಈ ಭಾಗದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಎಷ್ಟು ಹಿಂದುಳಿದಿವೆ ಎಂಬುದನ್ನು ಅವರು ಗಮನಿಸಬೇಕು. ಇವುಗಳ ಸುಧಾರಣೆಗೆ ಕ್ರಮ ಕೈಗೊಂಡರೆ ಜನರಿಗೂ ಒಳ್ಳೆಯದಾಗುತ್ತದೆ, ಅವರಿಗೂ ಒಳಿತಾಗುತ್ತದೆ ಎಂದು ವಿಜಯೇಂದ್ರ ತಿಳಿಸಿದರು.

ವಿಮಾನ ನಿಲ್ದಾಣ ವಿಚಾರದಲ್ಲಿ ನಿರ್ಲಕ್ಷ್ಯ:

ಬೀದರ್‌ನಲ್ಲಿ ಉಸ್ತುವಾರಿ ಸಚಿವರು ಮುತುವರ್ಜಿ ವಹಿಸಿ ವಿಮಾನಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಆದರೆ ಕಲಬುರ್ಗಿ ವಿಮಾನ ನಿಲ್ದಾಣದ ಕುರಿತು ರಾಜ್ಯ ಸರ್ಕಾರಕ್ಕೆ ಅಥವಾ ಸಚಿವರಿಗೆ ಆಸಕ್ತಿ ಇಲ್ಲದಂತಿದೆ. ಅವರು ಮನಸ್ಸು ಮಾಡಿದರೆ ಕೇವಲ ಐದು ನಿಮಿಷದಲ್ಲಿ ಈ ಸಮಸ್ಯೆ ಬಗೆಹರಿಸಬಹುದು, ಆದರೆ ಆ ಇಚ್ಛಾಶಕ್ತಿ ಅವರಲ್ಲಿ ಕಾಣುತ್ತಿಲ್ಲ ಎಂದು ಟೀಕಿಸಿದರು.

ಬಜೆಟ್ ವಿರುದ್ಧ ವಾಗ್ದಾಳಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ದೂರದೃಷ್ಟಿ ಇಲ್ಲ. ಇದರಿಂದ ರೈತರಿಗೆ ಮತ್ತು ಉದ್ಯೋಗಾಕಾಂಕ್ಷಿ ಯುವಕರಿಗೆ ಯಾವುದೇ ಅನುಕೂಲವಿಲ್ಲ. ಪ್ರಾದೇಶಿಕ ಅಸಮತೋಲನವು ಶೇ. 72.5ಕ್ಕೆ ಏರಿಕೆಯಾಗಿರುವುದು ಕಳವಳಕಾರಿ ಸಂಗತಿ ಎಂದು ಅವರು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದರು.

ಸಿದ್ಧರಾಮಯ್ಯ ಬಜೆಟ್‌ನಿಂದ ರಾಜ್ಯದ ಜನತೆಗೆ ನಿರಾಸೆ:  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ 15ನೇ ಬಜೆಟ್ ರಾಜ್ಯದ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದು, ಇದೊಂದು ದೂರದೃಷ್ಟಿಯಿಲ್ಲದ ಬಜೆಟ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತೀವ್ರವಾಗಿ ಟೀಕಿಸಿದ್ದಾರೆ.

“ಅನುಭವಿ ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವಾಗ ರಾಜ್ಯದ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈ ಬಜೆಟ್ ಎಲ್ಲ ಭರವಸೆಗಳನ್ನು ನುಚ್ಚುನೂರು ಮಾಡಿದೆ. ಬಜೆಟ್ ಮಂಡನೆಯ ಸಮಯದಲ್ಲಿ ಆಡಳಿತ ಪಕ್ಷದ ಶಾಸಕರಲ್ಲೇ ನಿರುತ್ಸಾಹ ಎದ್ದು ಕಾಣುತ್ತಿತ್ತು. ಸ್ವತಃ ಆಡಳಿತ ಪಕ್ಷದಲ್ಲೇ ಈ ಬಜೆಟ್ ಬಗ್ಗೆ ವಿರೋಧ ವ್ಯಕ್ತವಾಗುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ,” ಎಂದರು.

ಅಭಿವೃದ್ಧಿ ಕುಂಠಿತ:

“ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಈಗಿನ ಬಜೆಟ್ ನೋಡಿದರೆ ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ ಮುಂದುವರಿಯುವುದರಲ್ಲಿ ಸಂಶಯವಿಲ್ಲ. ಈ ಬಜೆಟ್ ರೈತರಿಗೆ ಪೂರಕವಾಗಿಲ್ಲ ಹಾಗೂ ಯುವಜನತೆಗೆ ಉದ್ಯೋಗ ಸೃಷ್ಟಿಸುವಲ್ಲಿಯೂ ಸಂಪೂರ್ಣವಾಗಿ ವಿಫಲವಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚಿದ ಪ್ರಾದೇಶಿಕ ಅಸಮತೋಲನ:

ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕುರಿತು ಪ್ರಸ್ತಾಪಿಸಿದ ವಿಜಯೇಂದ್ರ ಅವರು, “ಪ್ರೊ. ಗೋವಿಂದ ರಾವ್ ಅವರ ವರದಿಯ ಪ್ರಕಾರ ಕಲ್ಯಾಣ ಕರ್ನಾಟಕವು ಅಭಿವೃದ್ಧಿಯಲ್ಲಿ ಮತ್ತಷ್ಟು ಹಿಂದುಳಿದಿದೆ. ಈ ಹಿಂದೆ ಶೇ. 65 ರಷ್ಟಿದ್ದ ಪ್ರಾದೇಶಿಕ ಅಸಮತೋಲನವು ಈಗ ಶೇ. 72.5ಕ್ಕೆ ಏರಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದು ರಾಜ್ಯ ಸರ್ಕಾರದ ವಿಫಲತೆಗೆ ಸಾಕ್ಷಿ,” ಎಂದು ದೂರಿದರು


Share this with Friends

Related Post