ದಾವಣಗೆರೆ: ದಶಕಗಳಿಂದ ಶಾಮನೂರು ಕುಟುಂಬದ ಭದ್ರಕೋಟೆಯಂತಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಅಭ್ಯರ್ಥಿಯನ್ನು ಘೋಷಿಸುವ ಮೊದಲೇ, ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಪೈಪೋಟಿ ನೀಡುವಂತೆ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್ ಇಂದು ನಾಮಪತ್ರ ಸಲ್ಲಿಸಿ ಸೆಡ್ಡು ಹೊಡೆದಿದ್ದಾರೆ.
ಶುಕ್ರವಾರ ಬೆಳಿಗ್ಗೆ ಸಮರ್ಥ್ ಶಾಮನೂರು ಅವರು ಪಕ್ಷೇತರ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಸಾದಿಕ್ ಪೈಲ್ವಾನ್ ಕೂಡ ತಮ್ಮ ನೂರಾರು ಬೆಂಬಲಿಗರೊಂದಿಗೆ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು. ಇದು ಕ್ಷೇತ್ರದಲ್ಲಿ ಶಾಮನೂರು ಕುಟುಂಬದ ಏಕಸ್ವಾಮ್ಯಕ್ಕೆ ಸವಾಲು ಹಾಕಿದಂತೆ ಕಂಡುಬರುತ್ತಿದೆ.
ಟಿಕೆಟ್‌ಗಾಗಿ ನೇರ ಸಂಘರ್ಷ:
ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದು, ಈ ಬಾರಿ ಸಮುದಾಯದ ನಾಯಕರಿಗೇ ಟಿಕೆಟ್ ನೀಡಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಶಾಮನೂರು ಕುಟುಂಬದ ಹಿಡಿತದ ನಡುವೆಯೂ ಸಾದಿಕ್ ಪೈಲ್ವಾನ್ ಕಾಂಗ್ರೆಸ್ ಅಭ್ಯರ್ಥಿಯಾಗಿಯೇ ನಾಮಪತ್ರ ಸಲ್ಲಿಸಿರುವುದು ಹೈಕಮಾಂಡ್‌ಗೆ ನೇರ ಸಂದೇಶ ರವಾನಿಸಿದಂತಿದೆ. “ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಸಮುದಾಯದ ಹಿತದೃಷ್ಟಿಯಿಂದ ಈ ಬಾರಿ ನಮಗೆ ಟಿಕೆಟ್ ಸಿಗುವ ಭರವಸೆ ಇದೆ” ಎಂದು ಸಾದಿಕ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಕುತೂಹಲ ಕೆರಳಿಸಿದ ‘ಬಿ’ ಫಾರಂ ಗುಟ್ಟು:
ಸಮರ್ಥ್ ಶಾಮನೂರು ಮತ್ತು ಸಾದಿಕ್ ಪೈಲ್ವಾನ್ ಇಬ್ಬರೂ ಕಾಂಗ್ರೆಸ್ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದು, ಅಂತಿಮವಾಗಿ ‘ಬಿ’ ಫಾರಂ ಯಾರ ಕೈ ಸೇರಲಿದೆ ಎಂಬುದು ಈಗ ಯಕ್ಷಪ್ರಶ್ನೆಯಾಗಿದೆ. ಶಾಮನೂರು ಕುಟುಂಬದ ಪ್ರಭಾವಕ್ಕೆ ಮಣಿಯದೆ ಸಾದಿಕ್ ಅವರು ಕಣಕ್ಕಿಳಿದಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ. ಒಂದು ವೇಳೆ ಹೈಕಮಾಂಡ್ ಶಾಮನೂರು ಕುಟುಂಬಕ್ಕೆ ಮಣೆ ಹಾಕಿದರೆ, ಸಾದಿಕ್ ಅವರು ಬಂಡಾಯ ಅಭ್ಯರ್ಥಿಯಾಗಿ ಉಳಿಯುತ್ತಾರೆಯೇ ಅಥವಾ ಪಕ್ಷದ ನಿರ್ಧಾರಕ್ಕೆ ಬದ್ಧರಾಗುತ್ತಾರೆಯೇ ಎಂಬುದು ಸದ್ಯದ ಕುತೂಹಲ.
ಈ ಬೆಳವಣಿಗೆಯಿಂದಾಗಿ ದಾವಣಗೆರೆ ದಕ್ಷಿಣದ ಚುನಾವಣಾ ಕಣವು ಕೇವಲ ಬಿಜೆಪಿ-ಕಾಂಗ್ರೆಸ್ ನಡುವಿನ ಹೋರಾಟವಾಗಿ ಉಳಿಯದೆ, ಕಾಂಗ್ರೆಸ್ ಒಳಗಿನ ಆಂತರಿಕ ಸಮರದ ರೂಪ ಪಡೆದುಕೊಂಡಿದೆ.

