Fri. Mar 20th, 2026

ಬೆಂಗಳೂರು ಪಾದಚಾರಿ ಮಾರ್ಗಕ್ಕೆ ಹೊಸ ನೀತಿ: ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಬ್ರೇಕ್

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಪಾದಚಾರಿ ಮಾರ್ಗಗಳನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ನಗರದ ಮುಖ್ಯ ಮತ್ತು ಉಪ ಮುಖ್ಯರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿ ಇನ್ನು ಮುಂದೆ ಬೀದಿ ವ್ಯಾಪಾರಕ್ಕೆ ಅವಕಾಶವಿರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಜಿಬಿಎ (Greater Bengaluru Authority) ಕಾರ್ಯಕಾರಿ ಸಮಿತಿ ಮತ್ತು ಪಾಲಿಕೆಗಳ ಬಜೆಟ್ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಪಾದಚಾರಿಗಳ ಹಿತದೃಷ್ಟಿಯಿಂದ ಬೀದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗವನ್ನು ನಿಗದಿಪಡಿಸಲು ತೀರ್ಮಾನಿಸಲಾಗಿದೆ. ಈಗಾಗಲೇ 60 ಸಾವಿರ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದು, ಅಧಿಕೃತ ಗುರುತಿನ ಚೀಟಿ ಹೊಂದಿರುವವರಿಗೆ ಮಾತ್ರ ನಿಗದಿಪಡಿಸಿದ ರಸ್ತೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು. ಹಗಲು ವ್ಯಾಪಾರ ಮುಗಿಸಿ ರಾತ್ರಿ ವೇಳೆ ರಸ್ತೆ ಬದಿಯಲ್ಲೇ ಗಾಡಿಗಳನ್ನು ಬಿಟ್ಟು ಹೋದರೆ, ಅಂತಹವುಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ. ಈ ಹೊಸ ನೀತಿಗೆ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಒಮ್ಮತದ ಬೆಂಬಲ ಸೂಚಿಸಿದ್ದಾರೆ.

ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಅನಧಿಕೃತ ಫ್ಲೆಕ್ಸ್ ಹಾವಳಿಗೂ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಇನ್ನು ಮುಂದೆ ಅನುಮತಿ ಇಲ್ಲದೆ ಫ್ಲೆಕ್ಸ್ ಹಾಕುವವರಿಗೆ ಪ್ರತಿ ಫ್ಲೆಕ್ಸ್ ಗೆ 50 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಭಾರಿ ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ವಪಕ್ಷೀಯರು ಸೇರಿದಂತೆ ಯಾವುದೇ ಪಕ್ಷದವರು ನಿಯಮ ಉಲ್ಲಂಘಿಸಿದರೂ ದಂಡ ಅನಿವಾರ್ಯ. ಸರ್ಕಾರ ನಿಗದಿಪಡಿಸಿದ ಜಾಗಗಳಲ್ಲಿ ಮಾತ್ರ ಅನುಮತಿ ಪಡೆದು ಜಾಹೀರಾತುಗಳನ್ನು ಹಾಕಿಕೊಳ್ಳಲು ಅವಕಾಶ ನೀಡಲಾಗಿದೆ.

ಇನ್ನು ರಸ್ತೆ ಬದಿಯಲ್ಲಿ ವಾರಾನುಗಟ್ಟಲೆ ನಿಲ್ಲಿಸಿರುವ ಹಳೆಯ ಮತ್ತು ಪಾಳುಬಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡು ಬೆಲ್ಲಳ್ಳಿ, ಬಿಡಗಾನಹಳ್ಳಿ ಸೇರಿದಂತೆ ನಗರದ ಹೊರವಲಯದ ನಿಗದಿತ ಜಾಗಗಳಿಗೆ ಸ್ಥಳಾಂತರಿಸಲಿದ್ದಾರೆ. ನೋ-ಪಾರ್ಕಿಂಗ್ ವಲಯದಲ್ಲಿ ವಾಹನ ನಿಲ್ಲಿಸಿದರೆ ಟೋಯಿಂಗ್ ಮಾಡಲು ಪ್ರತಿ ಪಾಲಿಕೆಗೆ ತಲಾ 2 ವಾಹನಗಳನ್ನು ಒದಗಿಸಲಾಗಿದೆ. ಇದರೊಂದಿಗೆ ಪಾರ್ಕ್‌ಗಳ ಸಮಯದ ಬಗ್ಗೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಹೊಸ ವೇಳಾಪಟ್ಟಿ ಸಿದ್ಧಪಡಿಸಲು ನಿರ್ಧರಿಸಲಾಗಿದೆ.

ವಾರ್ಡ್‌ಗಳ ಅಭಿವೃದ್ಧಿಗೆ 5 ರಿಂದ 10 ಕೋಟಿ ರೂ. ಅನುದಾನ ನೀಡುವಂತೆ ಶಾಸಕರು ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಬಜೆಟ್‌ನಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಡಿಸಿಎಂ ತಿಳಿಸಿದರು. ದಾವಣಗೆರೆ ಉಪಚುನಾವಣೆ ಅಭ್ಯರ್ಥಿ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಾಹಿತಿ ಪಡೆದು ಉತ್ತರಿಸುವುದಾಗಿ ತಿಳಿಸಿದರು. ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.


Share this with Friends

Related Post