Sat. Jun 6th, 2026

ಶಾರ್ಟ್ ಸರ್ಕ್ಯೂಟ್ ನಿಂದ ಬಿನ್ನಿಪೇಟೆಯಲ್ಲಿ ಫ್ಯಾನ್ಸಿ ಸ್ಟೋರ್ ಭಸ್ಮ, ಲಕ್ಷಾಂತರ ರೂ. ಮೌಲ್ಯದ ಸರಕು ಆಹುತಿ

Share this with Friends

ಬೆಂಗಳೂರು: ರಾಜಧಾನಿಯ ಮಾಗಡಿ ರಸ್ತೆಯ ಬಿನ್ನಿಪೇಟೆ ವಾರ್ಡ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡವೊಂದು ಉದ್ಯಮಿಯೊಬ್ಬರ ಬದುಕನ್ನೇ ಬೀದಿಗೆ ತಂದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಫ್ಯಾನ್ಸಿ ಸ್ಟೋರ್‌ವೊಂದು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ನಷ್ಟವಾಗಿದೆ.

ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಹರಡಿದ ಬೆಂಕಿ ಅಂಗಡಿಯಲ್ಲಿದ್ದ ಪ್ಲಾಸ್ಟಿಕ್ ಹಾಗೂ ಅಲಂಕಾರಿಕ ವಸ್ತುಗಳನ್ನು ಆಹುತಿ ಪಡೆದಿದೆ. ಹೊಗೆಯ ಆವರಿಸುವಿಕೆ ಕಂಡು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರಾದರೂ, ಅಷ್ಟರಲ್ಲಾಗಲೇ ಅಂಗಡಿಯ ಬಹುತೇಕ ವಸ್ತುಗಳು ಬೂದಿಯಾಗಿದ್ದವು.

ನೊಂದ ಮಾಲೀಕರಿಗೆ ಶಾಸಕರ ಸಾಂತ್ವನ:

ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಗಾಂಧಿನಗರ ಶಾಸಕ ಹಾಗೂ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಂಗಾಲಾಗಿದ್ದ ಅಂಗಡಿ ಮಾಲೀಕರನ್ನು ಭೇಟಿಯಾಗಿ ಧೈರ್ಯ ತುಂಬಿದ ಅವರು, ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

“ಬಿನ್ನಿಪೇಟೆಯಲ್ಲಿ ಸಂಭವಿಸಿದ ಈ ಅಗ್ನಿ ದುರಂತ ಅತ್ಯಂತ ದುರದೃಷ್ಟಕರ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾಗಿವೆ. ಒಂದು ಕುಟುಂಬದ ಜೀವನೋಪಾಯಕ್ಕೆ ಆಸರೆಯಾಗಿದ್ದ ಅಂಗಡಿ ಇಂದು ಈ ಸ್ಥಿತಿಗೆ ತಲುಪಿರುವುದು ವಿಷಾದನೀಯ. ಸಂಕಷ್ಟದಲ್ಲಿರುವ ಈ ಕುಟುಂಬಕ್ಕೆ ನಾನು ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಲಿದ್ದೇನೆ. ಅವರ ಬದುಕು ಮತ್ತೆ ಸಹಜ ಸ್ಥಿತಿಗೆ ಬರುವವರೆಗೂ ನಾವು ಅವರೊಂದಿಗೆ ಸದಾ ಇರುತ್ತೇವೆ,” ಎಂದು ಶಾಸಕರು ಭರವಸೆ ನೀಡಿದರು.

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

 


Share this with Friends

Related Post