Sat. Jun 6th, 2026

ಬೆಳ್ಳಂಬೆಳಗ್ಗೆಯೇ ಪಾಲಿಕೆ ಕಾರ್ಯಾಚರಣೆ: ಚಿಕ್ಕಪೇಟೆಯಲ್ಲಿ ಅನಧಿಕೃತ ಬ್ಯಾನರ್ ಗಳ ತೆರವು

Share this with Friends

ಬೆಂಗಳೂರು: ನಗರದ ಅಂದಗೆಡಿಸುತ್ತಿದ್ದ ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ವಿರುದ್ಧ ಬೆಂಗಳೂರು ಕೇಂದ್ರ ನಗರ ಪಾಲಿಕೆ (BCCC) ಸಮರ ಸಾರಿದೆ. ಅದರಲ್ಲೂ ವಿಶೇಷವಾಗಿ ಜನನಿಬಿಡ ಚಿಕ್ಕಪೇಟೆ ವಲಯದಲ್ಲಿ ಪಾದಚಾರಿಗಳ ಜೀವಕ್ಕೆ ಕಂಟಕವಾಗಿದ್ದ ಹಾಗೂ ವಿದ್ಯುತ್ ಕಂಬಗಳನ್ನು ಆವರಿಸಿಕೊಂಡಿದ್ದ ಬೃಹತ್ ಬ್ಯಾನರ್‌ಗಳನ್ನು ಪಾಲಿಕೆ ಸಿಬ್ಬಂದಿ ಕಿತ್ತೆಸೆದಿದ್ದಾರೆ.

ಕಣ್ಣಿಗೆ ರಾಚುತ್ತಿದ್ದ ಕಟೌಟ್‌ಗಳ ತೆರವು:

ಚಿಕ್ಕಪೇಟೆಯ ಪ್ರತಿ ಗಲ್ಲಿಯಲ್ಲೂ ರಾಜಕೀಯ ನಾಯಕರು, ಶುಭಾಶಯದ ಬೋರ್ಡ್‌ಗಳು ಹಾಗೂ ವ್ಯಾಪಾರ ಪ್ರಚಾರದ ಬ್ಯಾನರ್‌ಗಳು ಪಾದಚಾರಿ ಮಾರ್ಗವನ್ನೇ ಅತಿಕ್ರಮಿಸಿದ್ದವು. ಬಿಸಿಸಿಸಿ ಮತ್ತು ಬೃಹತ್ ಬೆಂಗಳೂರು ಪ್ರಾಧಿಕಾರದ (GBA) ಜಂಟಿ ಕಾರ್ಯಾಚರಣೆಯಲ್ಲಿ, ಒಂದೇ ದಿನದಲ್ಲಿ ನೂರಾರು ಅಕ್ರಮ ಬ್ಯಾನರ್‌ಗಳನ್ನು ಕಿತ್ತು ಲಾರಿಗಳಿಗೆ ತುಂಬಲಾಯಿತು. ಈ ಮೂಲಕ ಸಾರ್ವಜನಿಕ ಸ್ಥಳಗಳನ್ನು ‘ಬ್ಯಾನರ್ ಮುಕ್ತ’ಗೊಳಿಸಿ ಸುಗಮ ಸಂಚಾರಕ್ಕೆ ಹಾದಿ ಮಾಡಿಕೊಡಲಾಗಿದೆ.ಪಕ್ಷಾತೀತ,ಧರ್ಮಾತೀತವಾಗಿ ಎಲ್ಲಾ ಅನಧಿಕೃತ ಬ್ಯಾನರ್ ಗಳನ್ನೂ ತೆರವುಗೊಳಿಸಲಾಯಿತು.

ಜೀವಕ್ಕೆ ಕಂಟಕವಾಗಿದ್ದ ಫ್ಲೆಕ್ಸ್‌ಗಳು:

ಮಳೆ-ಗಾಳಿಗೆ ಹರಿದು ನೇತಾಡುತ್ತಿದ್ದ ಪ್ಲಾಸ್ಟಿಕ್ ಬ್ಯಾನರ್‌ಗಳು ದ್ವಿಚಕ್ರ ವಾಹನ ಸವಾರರ ಮೇಲೆ ಬಿದ್ದು ಅಪಘಾತಕ್ಕೆ ಕಾರಣವಾಗುತ್ತಿದ್ದವು. ಇನ್ನು ಕೆಲವು ಕಡೆ ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದ ಬಂಟಿಂಗ್‌ಗಳು ಬೆಂಕಿ ಅವಘಡದ ಭೀತಿ ಹುಟ್ಟಿಸಿದ್ದವು. ಇಂತಹ ಅಪಾಯಕಾರಿ ಬ್ಯಾನರ್‌ಗಳನ್ನು ತೆರವುಗೊಳಿಸುವ ಮೂಲಕ ಪಾಲಿಕೆ ಅಧಿಕಾರಿಗಳು ಸಾರ್ವಜನಿಕ ಸುರಕ್ಷತೆಗೆ ಮೊದಲ ಆದ್ಯತೆ ನೀಡಿದ್ದಾರೆ.

ಅಧಿಕಾರಿಗಳ ಖಡಕ್ ಎಚ್ಚರಿಕೆ:

“ಅನುಮತಿ ಇಲ್ಲದೆ ಒಂದೇ ಒಂದು ಬ್ಯಾನರ್ ಹಾಕಿದರೂ ಬಿಡುವುದಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕಟ್ಟುನಿಟ್ಟಿನ ಸೂಚನೆಯಂತೆ, ನಗರದ ಸೌಂದರ್ಯ ಕೆಡಿಸುವವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿ, ಭಾರಿ ಮೊತ್ತದ ದಂಡ ವಿಧಿಸಲಾಗುವುದು,” ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅಧಿಕಾರಿಗಳು ಎಚ್ಚರಿಸಿದ್ದಾರೆ.

 


Share this with Friends

Related Post