Sat. Jun 6th, 2026

ಶಾಮನೂರು,ಮೇಟಿ ಕುಟುಂಬಕ್ಕೆ ಟಿಕೆಟ್: ‘ಗೆಲುವೊಂದೇ ಮಾನದಂಡವೆಂದ’ ಜಿ. ಪರಮೇಶ್ವರ್

Share this with Friends

ಬೆಂಗಳೂರು: ದಾವಣಗೆರೆಯಲ್ಲಿ ಒಂದೇ ಕುಟುಂಬಕ್ಕೆ ಪದೇ ಪದೇ ಮಣೆ ಹಾಕಲಾಗುತ್ತಿದೆ ಎಂಬ ಟೀಕೆ ಸರಿಯಲ್ಲ “ಶಾಮನೂರು ಶಿವಶಂಕರಪ್ಪ ಅವರು ಈ ಭಾಗದಲ್ಲಿ ಭದ್ರವಾದ ನೆಲೆ ಹೊಂದಿದ್ದಾರೆ. ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡುವುದು ಕೇವಲ ಕುಟುಂಬದ ಕಾರಣಕ್ಕಲ್ಲ, ಬದಲಿಗೆ ಅವರ ಗೆಲುವಿನ ಸಾಮರ್ಥ್ಯದ ಮೇಲೆ ನಿರ್ಧರಿಸಲಾಗಿದೆ. ಪಕ್ಷದ ಗೆಲುವೇ ನಮಗೆ ಮುಖ್ಯ,” ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕ್ಷೇತ್ರದಲ್ಲಿ ಯಾರಿಗೆ ಹೆಚ್ಚು ಗೆಲ್ಲುವ ಸಾಧ್ಯತೆ ಇದೆ ಎಂಬ ಬಗ್ಗೆ ಸ್ಥಳೀಯ ಕಾರ್ಯಕರ್ತರು ಮತ್ತು ನಾಯಕರಿಂದ ವರದಿ ಪಡೆಯಲಾಗಿದೆ. ಯಾರು ಜನಸಾಮಾನ್ಯರಿಗೆ ಹೆಚ್ಚು ಹತ್ತಿರವಾಗಿದ್ದಾರೋ ಮತ್ತು ಗೆಲ್ಲುವ ಶಕ್ತಿ ಹೊಂದಿದ್ದಾರೋ ಅಂತಹವರನ್ನು ಕಣಕ್ಕಿಳಿಸುವುದು ಪಕ್ಷದ ತೀರ್ಮಾನ,” ಎಂದರು.

ಹೈಕಮಾಂಡ್ ನಿರ್ಧಾರ ಅಂತಿಮ:

ಒಂದೇ ಕುಟುಂಬಕ್ಕೆ ಪದೇ ಪದೇ ಅಧಿಕಾರ ನೀಡಲಾಗುತ್ತಿದೆ ಎಂಬ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಅಂತಿಮ ನಿರ್ಧಾರ ಹೈಕಮಾಂಡ್‌ನದ್ದು. ಶಾಮನೂರು ಶಿವಶಂಕರಪ್ಪ ಅವರು ಈ ಕ್ಷೇತ್ರವನ್ನು ದೀರ್ಘಕಾಲ ಪ್ರತಿನಿಧಿಸಿದ್ದಾರೆ, ಹೀಗಾಗಿ ಅವರ ಕುಟುಂಬದ ಬೇಡಿಕೆ ಸಹಜ. ಅದೇ ರೀತಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪ್ರಬಲ ಅಸ್ತಿತ್ವ ಇರುವುದರಿಂದ ಅವರೂ ಟಿಕೆಟ್‌ಗಾಗಿ ಹಕ್ಕೊತ್ತಾಯ ಮಂಡಿಸಿದ್ದಾರೆ. ಎಲ್ಲವನ್ನೂ ಸಮತೋಲನಗೊಳಿಸಿ ಪಕ್ಷ ನಿರ್ಧಾರ ಕೈಗೊಂಡಿದೆ,” ಎಂದು ತಿಳಿಸಿದರು.

ಸಮರ್ಥ್ ಶಾಮನೂರು ಅವರು ಈಗಾಗಲೇ ನಾಮಪತ್ರ ಸಲ್ಲಿಕೆ ಮಾಡಿದ್ದು, ಪಕ್ಷದ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಿ ಗೆಲುವು ಸಾಧಿಸಲಿದ್ದೇವೆ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು

‘ಮೇಟಿ ಕುಟುಂಬಕ್ಕೆ ಅವಕಾಶ:

ದಾವಣಗೆರೆ ದಕ್ಷಿಣದಂತೆಯೇ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಅಭ್ಯರ್ಥಿ ಆಯ್ಕೆಯ ಮಾನದಂಡ ‘ಗೆಲ್ಲುವ ಶಕ್ತಿ’ ಮಾತ್ರ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.

ಬಾಗಲಕೋಟೆ ಕ್ಷೇತ್ರದ ಟಿಕೆಟ್ ಹಂಚಿಕೆ ಕುರಿತು ಮಾತನಾಡಿದ ಅವರು,”ಬಾಗಲಕೋಟೆಯಲ್ಲಿ ದಿವಂಗತ ಶಾಸಕ ಎಚ್.ವೈ. ಮೇಟಿ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕೆಂಬ ಬಲವಾದ ಒತ್ತಾಯ ಕೇಳಿಬಂದಿತ್ತು. ಮೇಟಿ ಅವರ ಪುತ್ರ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡುವ ಬಗ್ಗೆ ಕ್ಷೇತ್ರದಲ್ಲಿ ಚರ್ಚೆಗಳು ನಡೆಯುತ್ತಿದ್ದವಿ. ಅವರ ಕುಟುಂಬಕ್ಕೆ ಕ್ಷೇತ್ರದಲ್ಲಿರುವ ಜನಬೆಂಬಲವನ್ನು ನಾವು ಕಡೆಗಣಿಸುವಂತಿರಲಿಲ್ಲ ಹಾಗಾಗಿ ಗೆಲುವಿನ ಮಾನದಂಡದಂತೆ ಉಮೇಶ್ ಮೇಟಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದರು.

 


Share this with Friends

Related Post