Sat. Jun 6th, 2026

ಉಪಚುನಾವಣೆ ಅಖಾಡಕ್ಕೆ ಮೈತ್ರಿ ಬಲ: ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕುಮಾರಸ್ವಾಮಿ ಸಾಥ್

Share this with Friends

ಬಾಗಲಕೋಟೆ: ರಾಜ್ಯದ ಕುತೂಹಲಕಾರಿ ರಾಜಕೀಯ ಬೆಳವಣಿಗೆಯೊಂದರಲ್ಲಿ, ಮುಂಬರುವ ಉಪಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ಸಜ್ಜಾಗಿದ್ದು, ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಚುನಾವಣಾ ರಣತಂತ್ರದ ಕುರಿತು ಚರ್ಚಿಸಿದ್ದೇವೆ. ಜೆಡಿಎಸ್ ಪಕ್ಷವು ಬಿಜೆಪಿಗೆ ತನ್ನ ಪೂರ್ಣ ಬೆಂಬಲವನ್ನು ನೀಡಲು ನಿರ್ಧರಿಸಿದೆ. ಬಾಗಲಕೋಟೆಯ ವೀರಣ್ಣ ಚರಂತಿಮಠ್ ಮತ್ತು ದಾವಣಗೆರೆ ದಕ್ಷಿಣದ ಶ್ರೀನಿವಾಸ ದಾಸ್ ಕರಿಯಪ್ಪ ಅವರ ಪರವಾಗಿ ಜೆಡಿಎಸ್ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಜಂಟಿ ಸಮರ:

ರಾಜ್ಯದ ಹಾಲಿ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯಿಂದ ಜನತೆ ಬೇಸತ್ತಿದ್ದಾರೆ. ರೈತ ವಿರೋಧಿ ಮತ್ತು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಸರ್ಕಾರಕ್ಕೆ ಈ ಉಪಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಕುಮಾರಸ್ವಾಮಿ ಅವರ ಬೆಂಬಲದೊಂದಿಗೆ ಮೈತ್ರಿಕೂಟದ ಅಭ್ಯರ್ಥಿಗಳು ಎರಡೂ ಕ್ಷೇತ್ರಗಳಲ್ಲಿ ಅಭೂತಪೂರ್ವ ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಆಡಳಿತದ 8,931 ದಿನಗಳ ಮೈಲಿಗಲ್ಲು: 

ಪ್ರಧಾನಿ ನರೇಂದ್ರ ಮೋದಿ ಅವರು ಸತತವಾಗಿ 8,931 ದಿನಗಳ ಕಾಲ ಅಧಿಕಾರ ನಡೆಸಿರುವುದು ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಬಣ್ಣಿಸಿದ್ದಾರೆ.

ಪ್ರಧಾನಿ ಮೋದಿಯವರ ಈ ದೀರ್ಘಾವಧಿಯ ಜನಪರ ಆಡಳಿತವು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು .

ಅಭಿವೃದ್ಧಿಯ ಪಥದಲ್ಲಿ ಭಾರತ:

ಮೋದಿ ಅವರ ದಿಟ್ಟ ನಾಯಕತ್ವದಲ್ಲಿ ಭಾರತವು ಇಂದು ಜಾಗತಿಕ ಮಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಸಾಗುತ್ತಿದೆ. ದೇಶಾದ್ಯಂತ ಅವರ ಆಡಳಿತ ವೈಖರಿಯನ್ನು ಜನತೆ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಸತತ ಎಂಟು ಸಾವಿರಕ್ಕೂ ಅಧಿಕ ದಿನಗಳ ಕಾಲ ವಿಶ್ರಾಂತಿಯಿಲ್ಲದೆ ದೇಶದ ಸೇವೆ ಮಾಡುತ್ತಿರುವ ಅವರ ಶಕ್ತಿ ಮತ್ತು ಸಂಕಲ್ಪ ಎಲ್ಲರಿಗೂ ಮಾದರಿಯಾಗಿದೆ ಎಂದು ವಿಜಯೇಂದ್ರ ನುಡಿದರು.

ಜನಪ್ರಿಯತೆಯ ದಾಖಲೆ:

ದಶಕಗಳ ಕಾಲ ಅಧಿಕಾರದಲ್ಲಿದ್ದರೂ ಮೋದಿ ಅವರ ಮೇಲಿನ ಜನರ ವಿಶ್ವಾಸ ಕುಗ್ಗಿಲ್ಲ. ಬದಲಾಗಿ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಅವರು ಕೈಗೊಂಡಿರುವ ನಿರ್ಧಾರಗಳು ಅವರನ್ನು ವಿಶ್ವದ ಅತ್ಯಂತ ಪ್ರಭಾವಿ ನಾಯಕನನ್ನಾಗಿ ರೂಪಿಸಿದೆ ಎಂದು ವಿಜಯೇಂದ್ರ ಈ ಸಂದರ್ಭದಲ್ಲಿ ವಿಶ್ಲೇಷಿಸಿದರು


Share this with Friends

Related Post