ಬಾಗಲಕೋಟೆ: ನಗರದ ವಿಧಾನಸಭಾ ಉಪಚುನಾವಣೆಯ ಕಣ ರಂಗೇರಿದ್ದು, ಬಿಜೆಪಿ ಅಧಿಕೃತ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಸೋಮವಾರ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಶಕ್ತಿ ಪ್ರದರ್ಶನ ನಡೆಸಿ, ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಬಸವೇಶ್ವರ ವೃತ್ತದಲ್ಲಿರುವ ಜಗಜ್ಯೋತಿ ಬಸವಣ್ಣನವರ ಪುತ್ಥಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ವಿಜಯದ ವಿಶ್ವಾಸ ಮೊಳಗಿಸಿದ ನಾಯಕರು:
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ. ವಿಜಯೇಂದ್ರ, “ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ವಿರೋಧಿ ಧೋರಣೆಗೆ ಈ ಉಪಚುನಾವಣೆ ಸಾಕ್ಷಿಯಾಗಲಿದೆ. ಬಾಗಲಕೋಟೆಯ ಜನರು ಬಿಜೆಪಿಯ ಅಭಿವೃದ್ಧಿ ಪರ ರಾಜಕಾರಣವನ್ನು ಬೆಂಬಲಿಸಲಿದ್ದಾರೆ,” ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, “ಪ್ರಧಾನಿ ಮೋದಿಯವರ ನಾಯಕತ್ವ ಮತ್ತು ಚರಂತಿಮಠ ಅವರ ಜನಪರ ಕೆಲಸಗಳು ಈ ಬಾರಿ ನಮಗೆ ದೊಡ್ಡ ಗೆಲುವು ತಂದುಕೊಡಲಿವೆ. ಕಾರ್ಯಕರ್ತರ ಉತ್ಸಾಹವೇ ಜಯದ ಮುನ್ಸೂಚನೆ,” ಎಂದು ತಿಳಿಸಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾತನಾಡಿ, “ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಅನಿವಾರ್ಯ. ಚರಂತಿಮಠ ಅವರು ಈ ಭಾಗದ ನಾಡಿಮಿಡಿತ ಅರಿತ ನಾಯಕರಾಗಿದ್ದು, ಮತ್ತೊಮ್ಮೆ ಅವರಿಗೆ ಮತದಾರರು ಆಶೀರ್ವದಿಸಲಿದ್ದಾರೆ,” ಎಂದು ಭರವಸೆ ವ್ಯಕ್ತಪಡಿಸಿದರು.
ಅಭ್ಯರ್ಥಿ ವೀರಣ್ಣ ಚರಂತಿಮಠ ಮಾತನಾಡಿ, “ನನ್ನ ಮೇಲೆ ನಂಬಿಕೆಯಿಟ್ಟು ಪಕ್ಷ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಕ್ಷೇತ್ರದ ಜನರ ಪ್ರೀತಿ ಮತ್ತು ಹಿರಿಯ ನಾಯಕರ ಮಾರ್ಗದರ್ಶನವೇ ನನ್ನ ಶಕ್ತಿ,” ಎಂದು ನುಡಿದರು.
ಗಣ್ಯರ ದಂಡು:
ಈ ಐತಿಹಾಸಿಕ ಮೆರವಣಿಗೆಯಲ್ಲಿ ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ. ಗದ್ದೀಗೌಡರ್, ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ. ಭಾಂಡಗೆ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಮುರುಗೇಶ್ ನಿರಾಣಿ, ಅರವಿಂದ ಲಿಂಬಾವಳಿ, ಎಸ್.ಕೆ. ಬೆಳ್ಳುಬ್ಬಿ, ಶಾಸಕ ಸಿದ್ದು ಸವದಿ, ಪಿ.ಹೆಚ್. ಪೂಜಾರ್, ಎನ್. ಮಹೇಶ್, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್ ಹಾಗೂ ಎ.ಎಸ್. ಪಾಟೀಲ್ ನಡಹಳ್ಳಿ ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.
ಕೇಸರಿ ಪಡೆ ಸಂಭ್ರಮ:
ಮೆರವಣಿಗೆಯುದ್ದಕ್ಕೂ ‘ಭಾರತ್ ಮಾತಾ ಕೀ ಜೈ’, ‘ವೀರಣ್ಣ ಚರಂತಿಮಠ ಅವರಿಗೆ ಜಯವಾಗಲಿ’ ಎಂಬ ಘೋಷಣೆಗಳು ಮೊಳಗಿದವು. ಕೇಸರಿ ಪೇಟ ಧರಿಸಿದ ಸಾವಿರಾರು ಕಾರ್ಯಕರ್ತರು ವಾದ್ಯಗೋಷ್ಠಿಗಳೊಂದಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಅಂತಿಮವಾಗಿ ವಿಜಯೇಂದ್ರ, ಪ್ರಹ್ಲಾದ್ ಜೋಷಿ, ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಾಮಪತ್ರ ಸಲ್ಲಿಕೆ ಮಾಡಿದರು.

