ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಎಲ್‌ಪಿಜಿ ಸಿಲಿಂಡರ್ ಅಭಾವದ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಕ್ಕೊಳಗಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗೃಹಬಳಕೆಯ ಸಿಲಿಂಡರ್‌ಗಳ ಕೊರತೆ ರಾಜ್ಯದಲ್ಲಿ ಇಲ್ಲ. ಪ್ರತಿಯೊಬ್ಬರಿಗೂ ಸಿಲಿಂಡರ್ ಅವರ ಮನೆಬಾಗಿಲಿಗೇ ತಲುಪಲಿದೆ. ಜನರು ಆತಂಕದಿಂದ ಮುಂಗಡ ಬುಕಿಂಗ್ ಮಾಡಲು ಅಥವಾ ಏಜೆನ್ಸಿಗಳ ಮುಂದೆ ಸಾಲಿನಲ್ಲಿ ನಿಲ್ಲಲು ಹೋಗಬಾರದು,” ಎಂದು ಮನವಿ ಮಾಡಿದರು.
ಕೇಂದ್ರದಿಂದ ಹೆಚ್ಚಿನ ಕೋಟಾ:
ವಾಣಿಜ್ಯ ಸಿಲಿಂಡರ್‌ಗಳ ಕೊರತೆ ನೀಗಿಸಲು ಕೇಂದ್ರ ಸರ್ಕಾರವು ಕರ್ನಾಟಕದ ದೈನಂದಿನ ಕೋಟಾವನ್ನು 16,105 ಕ್ಕೆ ಏರಿಸಿದೆ. ಇದರಲ್ಲಿ ಹೋಟೆಲ್ ಉದ್ಯಮಕ್ಕೆ 10,000, ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳಿಗೆ 4,200 ಹಾಗೂ ಅಗತ್ಯ ಸೇವೆಗಳಿಗೆ 1,200 ಸಿಲಿಂಡರ್‌ಗಳನ್ನು ಹಂಚಿಕೆ ಮಾಡಲಾಗುವುದು. ಪಶ್ಚಿಮ ಏಷ್ಯಾ ಸಂಘರ್ಷದಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರೂ, ಈಗ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಅವರು ವಿವರಿಸಿದರು.
ಬುಕಿಂಗ್‌ಗೆ ಹೊಸ ನಿಯಮ:
ಸಿಲಿಂಡರ್‌ಗಳ ದುರ್ಬಳಕೆ ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೊಳಿಸಿದೆ. ನಗರ ಪ್ರದೇಶದ ಗ್ರಾಹಕರು ಒಂದು ಸಿಲಿಂಡರ್ ಪಡೆದ 25 ದಿನಗಳ ನಂತರ ಮತ್ತು ಗ್ರಾಮೀಣ ಭಾಗದವರು 45 ದಿನಗಳ ನಂತರವಷ್ಟೇ ಮುಂದಿನ ಬುಕಿಂಗ್ ಮಾಡಲು ಅವಕಾಶವಿರುತ್ತದೆ. ಇದರಿಂದ ಕೃತಕ ಅಭಾವ ತಡೆಯಲು ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
ಕಟ್ಟುನಿಟ್ಟಿನ ಕ್ರಮ:
ಅಕ್ರಮವಾಗಿ ಗ್ಯಾಸ್ ಸಂಗ್ರಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಬೆಂಗಳೂರು, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. ವಾಣಿಜ್ಯ ಬಳಕೆದಾರರು ಪಾರದರ್ಶಕತೆಗಾಗಿ ಗೇಲ್ (GAIL) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು.

