ತುಮಕೂರು: ಕ್ಯಾತ್ಸಂದ್ರದ ಶ್ರೀ ಸಿದ್ದಗಂಗಾ ಮಠದಲ್ಲಿ ಏಪ್ರಿಲ್ 1ರಂದು ನಡೆಯಲಿರುವ ಲಿಂಗೈಕ್ಯ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಶಿವಯೋಗಿಗಳ 119ನೇ ಜಯಂತ್ಯುತ್ಸವ ಹಾಗೂ ಗುರುವಂದನಾ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳು ಆಗಮಿಸುತ್ತಿದ್ದಾರೆ. ಗಣ್ಯರ ಭದ್ರತೆಯ ದೃಷ್ಟಿಯಿಂದ ತುಮಕೂರು ಜಿಲ್ಲಾಧಿಕಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ನಿಲುಗಡೆಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಆದೇಶಿಸಿದ್ದಾರೆ.
ವಾಹನ ನಿಲುಗಡೆ ನಿಷೇಧ:
ದಿನಾಂಕ 31-03-2026ರ ಮಧ್ಯರಾತ್ರಿಯಿಂದ ಏಪ್ರಿಲ್ 1ರ ಮಧ್ಯಾಹ್ನ 1:30ರವರೆಗೆ ಶ್ರೀ ಶಿವಕುಮಾರ್ ಸ್ವಾಮೀಜಿ ಸರ್ಕಲ್‌ನಿಂದ ಬಟವಾಡಿ ಅಂಡರ್‌ಪಾಸ್, ಎಪಿಎಂಸಿ ಯಾರ್ಡ್ ಮತ್ತು ಕ್ಯಾತ್ಸಂದ್ರ ಎನ್‌ಹೆಚ್-48 ಸರ್ಕಲ್‌ನಿಂದ ಸಿದ್ದಗಂಗಾ ಮಠದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ವಾಹನಗಳ ಪಾರ್ಕಿಂಗ್ ಅನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಪರ್ಯಾಯ ಸಂಚಾರ ಮಾರ್ಗಗಳು:
ಬೆಂಗಳೂರಿನಿಂದ ತುಮಕೂರು ನಗರಕ್ಕೆ ಬರುವವರಿಗೆ: ಲಘು ವಾಹನಗಳು ಹನುಮಂತಪುರ ಬ್ರಿಡ್ಜ್ ಮತ್ತು ಕೋತಿತೋಪು ರಸ್ತೆ ಮೂಲಕ ಸಂಚರಿಸಬೇಕು. ಭಾರಿ ವಾಹನಗಳು ಸತ್ಯಮಂಗಲ ರಸ್ತೆ ಮೂಲಕ ನಗರ ಪ್ರವೇಶಿಸಬೇಕು.
ತುಮಕೂರು ನಗರದಿಂದ ಬೆಂಗಳೂರಿಗೆ ಹೋಗುವವರಿಗೆ: ಭಾರಿ ವಾಹನಗಳು ಅಶೋಕ ರಸ್ತೆ, ಚರ್ಚ್ ಸರ್ಕಲ್ ಮತ್ತು ಶಿರಾಗೇಟ್ ಮೂಲಕ ಸತ್ಯಮಂಗಲ ರಸ್ತೆ ಸೇರಿ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಸಂಪರ್ಕ ಪಡೆಯಬೇಕು. ಲಘು ವಾಹನಗಳು ಅಮಾನಿಕೆರೆ ರಸ್ತೆ ಮತ್ತು ಕೋತಿತೋಪು ಸರ್ಕಲ್ ಮೂಲಕ ಹನುಮಂತಪುರ ಬ್ರಿಡ್ಜ್ ತಲುಪಿ ಹೆದ್ದಾರಿ ಸೇರಬೇಕು.
ಸಾರ್ವಜನಿಕರು ಮತ್ತು ವಾಹನ ಸವಾರರು ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನಿಸಿ ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಲಾಗಿದೆ.
ಬೆಂಗಳೂರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ: ತುಮಕೂರಿನ ಸಿದ್ದಗಂಗಾ ಮಠದಲ್ಲಿ ಆಯೋಜಿಸಲಾಗಿರುವ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತ್ಯುತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮಂಗಳವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದರು.
ಭಾರತೀಯ ವಾಯುಸೇನೆಯ ವಿಶೇಷ ವಿಮಾನದ ಮೂಲಕ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ರಾಷ್ಟ್ರಪತಿಗಳನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಹಾಗೂ ರಾಜ್ಯ ಸಚಿವ ರಾಮಲಿಂಗರೆಡ್ಡಿ ಅವರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಮ್ ಸೇರಿದಂತೆ ಹಿರಿಯ ಅಧಿಕಾರಿಗಳ ದಂಡೇ ವಿಮಾನ ನಿಲ್ದಾಣದಲ್ಲಿ ಹಾಜರಿತ್ತು. ಸ್ವಾಗತ ಕಾರ್ಯಕ್ರಮದ ನಂತರ ರಾಷ್ಟ್ರಪತಿಗಳು ಬಿಗಿ ಭದ್ರತೆಯಲ್ಲಿ ಲೋಕ ಭವನದತ್ತ ತೆರಳಿದರು.
ಬುಧವಾರ ಬೆಳಿಗ್ಗೆ ತುಮಕೂರಿಗೆ ಪ್ರಯಾಣಿಸಲಿರುವ ಅವರು, ಮಧ್ಯಾಹ್ನದವರೆಗೆ ನಡೆಯುವ ಸಿದ್ದಗಂಗಾ ಮಠದ ಐತಿಹಾಸಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

