ಬೆಂಗಳೂರು: “ನಾವು ಉಚಿತವಾಗಿ ಗ್ಯಾಸ್ ಪೂರೈಕೆ ಮಾಡುವಂತೆ ಕೇಳುತ್ತಿಲ್ಲ. ಕಂಪನಿಗಳಿಗೆ ಬೇಕಿದ್ದರೆ ದರವನ್ನು ಸ್ವಲ್ಪ ಹೆಚ್ಚಳ ಮಾಡಲಿ, ಆದರೆ ಮೊದಲು ಸುಗಮ ಪೂರೈಕೆಗೆ ಆದ್ಯತೆ ನೀಡಲಿ”ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿರುವ ಆಟೋ ಎಲ್‌ಪಿಜಿ (LPG) ಅಭಾವದ ಕುರಿತು ಕಳವಳ ವ್ಯಕ್ತಪಡಿಸಿದರು. ನಗರದಾದ್ಯಂತ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯದಿಂದಾಗಿ ಆಟೋ ಚಾಲಕರು ಎದುರಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸಿದ ಅವರು, ತಕ್ಷಣವೇ ಪೂರೈಕೆ ಸುಗಮಗೊಳಿಸುವಂತೆ ತೈಲ ಕಂಪನಿಗಳಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ನಗರದ ವಿವಿಧ ಗ್ಯಾಸ್ ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಉದ್ದದ ಸರತಿಯಲ್ಲಿ ನಿಂತಿರುವ ಆಟೋ ಚಾಲಕರ ಪರಿಸ್ಥಿತಿಯನ್ನು ಗಮನಿಸಿದ ಸಚಿವರು, “ನಾವು ಉಚಿತವಾಗಿ ಗ್ಯಾಸ್ ಕೊಡುವಂತೆ ಕೇಳುತ್ತಿಲ್ಲ. ಕಂಪನಿಗಳಿಗೆ ಲಾಭವಾಗಬೇಕಿದ್ದರೆ ದರವನ್ನು ಸ್ವಲ್ಪ ಮಟ್ಟಿಗೆ ಹೆಚ್ಚಳ ಮಾಡಲಿ, ಆದರೆ ಮೊದಲು ಸುಗಮವಾಗಿ ಗ್ಯಾಸ್ ಸಿಗುವಂತೆ ಮಾಡಲಿ” ಎಂದು ಖಡಕ್ ಆಗಿ ಹೇಳಿದರು. ಚಾಲಕರು ದಿನವಿಡೀ ಗ್ಯಾಸ್‌ಗಾಗಿ ಕಾಯುವುದರಿಂದ ಅವರ ಜೀವನೋಪಾಯಕ್ಕೆ ಭಾರಿ ಹೊಡೆತ ಬಿದ್ದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕೇಂದ್ರಕ್ಕೆ ಪತ್ರ ಬರೆದ ಸಿಎಂ:
ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕ ಸರ್ಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದು, ರಾಜ್ಯಕ್ಕೆ ನಿರಂತರವಾಗಿ ಎಲ್‌ಪಿಜಿ ಪೂರೈಕೆಯಾಗುವಂತೆ ನೋಡಿಕೊಳ್ಳಲು ಮನವಿ ಮಾಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದಂತಹ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಆಮದು ಪ್ರಕ್ರಿಯೆಯಲ್ಲಿ ಅಡೆತಡೆ ಉಂಟಾಗಿದೆ. ಇದು ದೇಶಾದ್ಯಂತ ಪೂರೈಕೆಯ ಮೇಲೆ ಪರಿಣಾಮ ಬೀರಿದೆ ಎಂದು ಸಚಿವರು ವಿವರಿಸಿದರು.
ಪರ್ಯಾಯ ಇಂಧನದತ್ತ ಚಿಂತನೆ:
ಕೇವಲ ಎಲ್‌ಪಿಜಿ ಮೇಲೆ ಅವಲಂಬಿತವಾಗುವುದರಿಂದ ಪದೇ ಪದೇ ಇಂತಹ ಬಿಕ್ಕಟ್ಟುಗಳು ಎದುರಾಗುತ್ತಿವೆ. ಆದ್ದರಿಂದ, ಪರ್ಯಾಯ ಇಂಧನ ಮೂಲವಾಗಿ ಹಸಿ ಕಸದಿಂದ ಉತ್ಪಾದಿಸುವ ‘ಬಯೋ ಗ್ಯಾಸ್’ (Biogas) ಬಳಕೆಯನ್ನು ಉತ್ತೇಜಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಬಳಸಿ ಇಂಧನ ತಯಾರಿಸುವ ಮೂಲಕ ಆಟೋ ಚಾಲಕರಿಗೆ ನೆರವಾಗುವುದು ಸರ್ಕಾರದ ಉದ್ದೇಶವಾಗಿದೆ ಎಂದು ರಾಮಲಿಂಗಾರೆಡ್ಡಿ ಮಾಹಿತಿ ನೀಡಿದರು.
ಸದ್ಯ ಬೆಂಗಳೂರಿನ ಬಸವೇಶ್ವರ ನಗರ, ರಾಜಾಜಿನಗರ ಸೇರಿದಂತೆ ಪ್ರಮುಖ ಬಡಾವಣೆಗಳ ಬಂಕ್‌ಗಳಲ್ಲಿ ದಾಸ್ತಾನು ಖಾಲಿಯಾಗಿದ್ದು, ಶೀಘ್ರವೇ ಪರಿಸ್ಥಿತಿ ತಿಳಿಯಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

