Sat. Jun 6th, 2026

ರಾಜ್ಯಾದ್ಯಂತ ಬಿಜೆಪಿ ಸಂಸ್ಥಾಪನಾ ದಿನಾಚರಣೆ: ಹಿರಿಯ ಕಾರ್ಯಕರ್ತರಿಗೆ ಗೌರವ ಸನ್ಮಾನ

Share this with Friends

ಬಾಗಲಕೋಟೆ/ಬೆಂಗಳೂರು: ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನವನ್ನು ರಾಜ್ಯಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬಾಗಲಕೋಟೆಯ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಪಾಲ್ಗೊಂಡು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಜನಸಂಘದ ಕಾಲದ ಹಿರಿಯರಿಗೆ ಸನ್ಮಾನ:

ಬಾಗಲಕೋಟೆಯ ಪಕ್ಷದ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಜನಸಂಘದ ಕಾಲದಿಂದಲೂ ಪಕ್ಷದ ಸಿದ್ಧಾಂತಕ್ಕಾಗಿ ನಿಷ್ಠೆಯಿಂದ ದುಡಿದ ಹಿರಿಯ ಕಾರ್ಯಕರ್ತರನ್ನು ಶಾಲು ಹೊದಿಸಿ ಗೌರವಿಸಲಾಯಿತು.ನಂತರ ಮಾತನಾಡಿದ ಬೊಮ್ಮಾಯಿ, “ಪಕ್ಷವು ಇಂದು ಈ ಮಟ್ಟಕ್ಕೆ ಬೆಳೆಯಲು ಜನಸಂಘದ ಕಾಲದಿಂದಲೂ ನಿಷ್ಠೆಯಿಂದ ದುಡಿದ ಹಿರಿಯ ಕಾರ್ಯಕರ್ತರ ತ್ಯಾಗವೇ ಕಾರಣ. ಅಧಿಕಾರ ಇರಲಿ ಇಲ್ಲದಿರಲಿ, ಸಿದ್ಧಾಂತಕ್ಕಾಗಿ ಬದುಕು ಸವಿಸಿದ ಮಹನೀಯರ ಮಾರ್ಗದರ್ಶನ ಇಂದಿನ ಯುವ ಪೀಳಿಗೆಗೆ ಅತ್ಯಗತ್ಯ,” ಎಂದು ಸ್ಮರಿಸಿದರು

ಬಿ.ಎಸ್. ಯಡಿಯೂರಪ್ಪ ಅವರ ಸಂದೇಶ:

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, “ಬಿಜೆಪಿ ಇಂದು ಬೃಹತ್ ಮಟ್ಟದಲ್ಲಿ ಬೆಳೆದು ನಿಲ್ಲಲು ಲಕ್ಷಾಂತರ ಕಾರ್ಯಕರ್ತರ ನಿಸ್ವಾರ್ಥ ಪರಿಶ್ರಮವೇ ಕಾರಣ. ಹಿರಿಯರ ಮಾರ್ಗದರ್ಶನದಲ್ಲಿ ಯುವ ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕು. ಮುಂಬರುವ ದಿನಗಳಲ್ಲಿ ಸಂಘಟಿತ ಹೋರಾಟದ ಮೂಲಕ ವಿಜಯ ಪತಾಕೆ ಹಾರಿಸೋಣ” ಎಂದು ಕರೆ ನೀಡಿದರು.

ಬಿ.ಎಲ್. ಸಂತೋಷ್ ಅವರ ಸಂಘಟನಾ ಮಂತ್ರ:

ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮಾತನಾಡಿ, “ಬಿಜೆಪಿ ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ, ಇದು ರಾಷ್ಟ್ರ ನಿರ್ಮಾಣದ ಗುರಿ ಹೊಂದಿರುವ ಸಂಘಟನೆ. ಬೂತ್ ಮಟ್ಟದಲ್ಲಿ ಪಕ್ಷದ ಸಿದ್ಧಾಂತವನ್ನು ಪ್ರತಿ ಮನೆಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಶಿಸ್ತು ಮತ್ತು ಸೇವಾ ಮನೋಭಾವವೇ ನಮ್ಮ ಪಕ್ಷದ ಅಸ್ತಿತ್ವ” ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

ರಾಜ್ಯದ ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಪಕ್ಷದ ಧ್ವಜ ಹಾರಿಸಿ, ಸಿಹಿ ಹಂಚುವ ಮೂಲಕ ಸಂಸ್ಥಾಪನಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ‘ರಾಷ್ಟ್ರ ಮೊದಲು’ ಎಂಬ ಸಂಕಲ್ಪದೊಂದಿಗೆ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಪಣತೊಟ್ಟರು.

 


Share this with Friends

Related Post