Sat. Jun 6th, 2026

ಬೆಂಗಳೂರು ಪೂರ್ವದಲ್ಲಿ ಅನಧಿಕೃತ ಜಾಹೀರಾತುಗಳ ವಿರುದ್ಧ ಸಮರ: ಮೂರೇ ದಿನದಲ್ಲಿ 1,800ಕ್ಕೂ ಹೆಚ್ಚು ಫ್ಲೆಕ್ಸ್ ತೆರವು

Share this with Friends

ಬೆಂಗಳೂರು: ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಡ್ಡಿಯಾಗಿರುವ ಅನಧಿಕೃತ ಜಾಹೀರಾತು ಫಲಕಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ಕಠಿಣ ಕಾರ್ಯಾಚರಣೆ ಆರಂಭಿಸಿದೆ. ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ಅವರ ನಿರ್ದೇಶನದಂತೆ ಏಪ್ರಿಲ್ 5 ರಿಂದ ವಿಶೇಷ ತೆರವು ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಕೇವಲ ಮೂರು ದಿನಗಳಲ್ಲಿ ದಾಖಲೆ ಪ್ರಮಾಣದ ತೆರವು ಕಾರ್ಯ ನಡೆದಿದೆ.

ವಲಯವಾರು ಕಾರ್ಯಾಚರಣೆ ವಿವರ:

ವಿಶೇಷ ತಂಡಗಳ ಮೂಲಕ ನಡೆಸಲಾದ ಈ ಕಾರ್ಯಾಚರಣೆಯಲ್ಲಿ ಏಪ್ರಿಲ್ 5 ರಿಂದ 7ರ ಅವಧಿಯಲ್ಲಿ ಒಟ್ಟು 1,872ಕ್ಕೂ ಹೆಚ್ಚು ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲಾಗಿದೆ.

ಕೆ.ಆರ್.ಪುರಂ ವಲಯ: 812 ಫ್ಲೆಕ್ಸ್ ತೆರವು.

ಮಹದೇವಪುರ ವಲಯ: 1,060 ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ತೆರವು.

ವಿಶೇಷ ತಂಡಗಳ ರಚನೆ:

ತೆರವು ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಪ್ರತಿ ವಿಭಾಗದಲ್ಲಿ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳಿಗೆ ದೈನಂದಿನ ಗುರಿಯನ್ನು ನೀಡಲಾಗಿದ್ದು, ಏಪ್ರಿಲ್ 13ರವರೆಗೆ ಈ ವಿಶೇಷ ಕಾರ್ಯಾಚರಣೆ ನಿರಂತರವಾಗಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಠಿಣ ಕಾನೂನು ಕ್ರಮದ ಎಚ್ಚರಿಕೆ:

ಪಾಲಿಕೆಯ ಅನುಮತಿ ಪಡೆಯದೆ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಥವಾ ಪೋಸ್ಟರ್‌ಗಳನ್ನು ಅಳವಡಿಸುವುದು ದಂಡನೀಯ ಅಪರಾಧವಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕೇವಲ ದಂಡ ಮಾತ್ರವಲ್ಲದೆ, ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಪಾಲಿಕೆ ಎಚ್ಚರಿಸಿದೆ.

ಸಾರ್ವಜನಿಕರಿಗೆ ಮನವಿ:

“ಸ್ವಚ್ಛ ಮತ್ತು ಸುಂದರ ಬೆಂಗಳೂರು ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಯಾವುದೇ ಜಾಹೀರಾತುಗಳನ್ನು ಪ್ರದರ್ಶಿಸುವ ಮೊದಲು ಪಾಲಿಕೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನಗರದ ಸುರಕ್ಷತೆ ದೃಷ್ಟಿಯಿಂದ ಅನಧಿಕೃತ ಬ್ಯಾನರ್‌ಗಳನ್ನು ಹಾಕುವುದನ್ನು ಬಿಡಬೇಕು,” ಎಂದು ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.

 


Share this with Friends

Related Post