Sat. Jun 6th, 2026

ಕರ್ನಾಟಕ ಮಾದರಿ ಆಡಳಿತ ತಮಿಳುನಾಡಿನಲ್ಲೂ ಜಾರಿ: ಡಿ.ಕೆ. ಶಿವಕುಮಾರ್ ಭರವಸೆ

Share this with Friends

ಚೆನ್ನೈ: “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ ಆರು ತಿಂಗಳಲ್ಲೇ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಾವು ನುಡಿದಂತೆ ನಡೆದಿದ್ದೇವೆ. ಇದೇ ಮಾದರಿಯ ಜನಪರ ಆಡಳಿತವನ್ನು ತಮಿಳುನಾಡಿನಲ್ಲೂ ಮುಂದುವರಿಸಲಾಗುವುದು,” ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಲ್ಲಿ ಘೋಷಿಸಿದರು.

ಚೆನ್ನೈನಲ್ಲಿ ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ನಮ್ಮ ಯೋಜನೆಗಳೇ ಬಿಜೆಪಿಗೆ ಸ್ಫೂರ್ತಿ:

“ನಾವು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಪ್ರಧಾನಮಂತ್ರಿಗಳು ಹಾಗೂ ಬಿಜೆಪಿ ನಾಯಕರು ಇದು ಅಸಾಧ್ಯ ಎಂದು ಲೇವಡಿ ಮಾಡಿದ್ದರು. ಆದರೆ ಇಂದು ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಬಿಹಾರದಂತಹ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿವೆ. ಇದು ನಮ್ಮ ಆಡಳಿತ ವೈಖರಿಗೆ ಸಂದ ಜಯ,” ಎಂದು ಅವರು ಪ್ರತಿಪಾದಿಸಿದರು.

ಮೈತ್ರಿ ಸರ್ಕಾರದ ಸಾಧನೆಗಳ ಮೇಲೆ ವಿಶ್ವಾಸ:

ಕಳೆದ ಹತ್ತು ವರ್ಷಗಳಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವು ತಮಿಳುನಾಡನ್ನು ಶಾಂತಿ ಮತ್ತು ಪ್ರಗತಿಯ ಹಾದಿಯಲ್ಲಿ ಮುನ್ನಡೆಸಿದೆ. ಯುಪಿಎ ಅವಧಿಯ ಉದ್ಯೋಗ ಖಾತರಿ, ಆಹಾರ ಭದ್ರತೆ ಮತ್ತು ಮಾಹಿತಿ ಹಕ್ಕಿನಂತಹ ಕ್ರಾಂತಿಕಾರಕ ಯೋಜನೆಗಳನ್ನು ನೆನಪಿಸಿದ ಅವರು, ಬಿಜೆಪಿ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.

ಪ್ರಜ್ಞಾವಂತ ಮತದಾರರಿಗೆ ಮನವಿ:

ತಮಿಳುನಾಡಿನ ಜನತೆ ಅತ್ಯಂತ ಬುದ್ಧಿವಂತರು ಮತ್ತು ಪ್ರಗತಿಪರ ಚಿಂತನೆಯುಳ್ಳವರು. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ಶೋಷಿತ ವರ್ಗಗಳ ರಕ್ಷಣೆಗಾಗಿ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮೈತ್ರಿಕೂಟದ ಅಭ್ಯರ್ಥಿಗಳನ್ನು ಭಾರಿ ಬಹುಮತದಿಂದ ಗೆಲ್ಲಿಸಬೇಕು ಎಂದು ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದರು.

 


Share this with Friends

Related Post