ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆಯ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಂಗಳೂರು ಮಹಾನಗರ ಘಟಕವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ.
ಮಹಾನಗರದ ಪ್ರಮುಖ ಪದಾಧಿಕಾರಿಗಳನ್ನೊಳಗೊಂಡ ನಿಯೋಗವು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಸುದೀರ್ಘ ಮನವಿ ಸಲ್ಲಿಸಿತು. ಕಂಪ್ಯೂಟರ್ ಸೈನ್ಸ್ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಸುಮಾರು 2 ಕೋಟಿ ರೂ.ಗಳಿಗೂ ಅಧಿಕ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ನಿಯೋಗವು ಗಂಭೀರ ಆರೋಪ ಮಾಡಿದೆ.
ವಿಶ್ವವಿದ್ಯಾಲಯದಲ್ಲಿ ನಡೆಯದ ‘ಆಹ್ವಾನಿತ ಉಪನ್ಯಾಸ’ಗಳಿಗಾಗಿ (Invitee Talks) ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ಲಪಟಾಯಿಸಲಾಗಿದೆ. ವಿದೇಶದಲ್ಲಿರುವ ಉಪನ್ಯಾಸಕರು ಇಲ್ಲಿಗೆ ಬಂದು ಪಾಠ ಮಾಡಿದ್ದಾರೆ ಎಂದು ತೋರಿಸಿರುವುದು ದಾಖಲೆಗಳ ತಿರುಚುವಿಕೆಗೆ ಸಾಕ್ಷಿಯಾಗಿದೆ ಎಂದು ಎಬಿವಿಪಿ ಆರೋಪಿಸಿದೆ. ಇದಲ್ಲದೆ, ವಿದ್ಯಾರ್ಥಿನಿಯರಿಗೆ ಕನಿಷ್ಠ ಮೂಲಸೌಕರ್ಯಗಳಾದ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿರುವ ಆಡಳಿತ ಮಂಡಳಿಯು, ಹಣ ಲೂಟಿ ಮಾಡುವಲ್ಲಿ ಮಾತ್ರ ಮಗ್ನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಈ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ ಪ್ರಾಮಾಣಿಕ ಸಿಬ್ಬಂದಿ ಮತ್ತು ಅಧ್ಯಾಪಕಿಯರಿಗೆ ಕಿರುಕುಳ ನೀಡಲಾಗುತ್ತಿದೆ. ಆದ್ದರಿಂದ, ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಈ ಕುರಿತು ಸಮಗ್ರ ವರದಿ ತರಿಸಿಕೊಂಡು ಕ್ರಮ ಜರುಗಿಸುವುದಾಗಿ ರಾಜ್ಯಪಾಲರು ಭರವಸೆ ನೀಡಿದ್ದಾರೆ ಎಂದು ನಿಯೋಗದ ಸದಸ್ಯರು ತಿಳಿಸಿದ್ದಾರೆ.

