ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಬೆಂಗಳೂರಿನಿಂದ ಮೈಸೂರಿಗೆ ವಿಶೇಷ ರೈಲಿನಲ್ಲಿ ಪ್ರಯಾಣಿಸುವ ಮೂಲಕ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪರೀಶೀಲನೆ ನಡೆಸಿದರು. ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ನಡೆಸಿದ ಈ ಐದು ಗಂಟೆಗಳ ಪ್ರಯಾಣವು ತಮಗೆ ವಿಶೇಷ ಅನುಭವ ನೀಡಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಕ್ರಾಂತಿವೀರಾ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಟ ಸಚಿವರು, ಮಧ್ಯಾಹ್ನ 3 ಗಂಟೆಗೆ ಮೈಸೂರು ತಲುಪಿದರು. ಈ ವೇಳೆ ‘ವಿಂಡೋ ಟ್ರೈಲಿಂಗ್’ (ಕಿಟಕಿ ಮೂಲಕ ಮಾರ್ಗ ವೀಕ್ಷಣೆ) ನಡೆಸಿ, ಹಳಿಗಳ ಸ್ಥಿತಿಗತಿ ಹಾಗೂ ನಿಲ್ದಾಣಗಳ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದರು.
ಜನರ ಸಮಸ್ಯೆ ಆಲಿಸಲು ರೈಲು ಪ್ರಯಾಣ:
ಪ್ರಯಾಣದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ಹಲವು ವರ್ಷಗಳ ನಂತರ ರೈಲಿನಲ್ಲಿ ಪ್ರಯಾಣಿಸಿದ್ದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಜನರ ನಡುವೆ ಸಂಚರಿಸಿ ಅವರ ಸಮಸ್ಯೆಗಳನ್ನು ಆಲಿಸುವುದು ನನಗೆ ಯಾವಾಗಲೂ ಇಷ್ಟ. ಕೇಂದ್ರ ಸಚಿವನಾಗಿ ಇಂದು ಮಾರ್ಗದ ಉದ್ದಕ್ಕೂ ಜನರನ್ನು ಭೇಟಿಯಾಗಿದ್ದು ರೋಮಾಂಚನ ಉಂಟುಮಾಡಿದೆ,” ಎಂದರು.
ಮಾರ್ಗ ಅಭಿವೃದ್ಧಿಗೆ ನೀಲನಕ್ಷೆ:
ಬೆಂಗಳೂರು ಮತ್ತು ಮೈಸೂರು ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಕುರಿತು ಸಚಿವ ವಿ. ಸೋಮಣ್ಣ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಮುಖ ವಿಷಯ:
ರಾಮನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ರೈಲು ನಿಲ್ದಾಣಗಳ ಆಧುನೀಕರಣ.
ಹೆಚ್ಚುವರಿ ರೈಲುಗಳ ಸಂಚಾರ ಹಾಗೂ ಪ್ರಮುಖ ನಿಲ್ದಾಣಗಳಲ್ಲಿ ರೈಲು ನಿಲುಗಡೆಗೆ ಆದ್ಯತೆ.
ವಾಣಿಜ್ಯ ಚಟುವಟಿಕೆಗಳ ವೃದ್ಧಿ ಹಾಗೂ ಆ ಮೂಲಕ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ.
“ರೈಲು ಸಾರಿಗೆ ದೇಶದ ಬೆನ್ನೆಲುಬು. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಈ ಭಾಗದ ರೈಲ್ವೆ ವ್ಯವಸ್ಥೆಯಲ್ಲಿ ಶೀಘ್ರದಲ್ಲೇ ದೊಡ್ಡ ಮಟ್ಟದ ಪರಿವರ್ತನೆಯಾಗಲಿದೆ,” ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಅಂಡರ್ಪಾಸ್ ಹಾಗೂ ನಿಲ್ದಾಣಗಳ ಮೇಲ್ದರ್ಜೆ:
ಮಾರ್ಗದುದ್ದಕ್ಕೂ ಇರುವ ಲೆವೆಲ್ ಕ್ರಾಸಿಂಗ್ಗಳನ್ನು (Level Crossings) ಸಂಪೂರ್ಣವಾಗಿ ಪರಿಶೀಲಿಸಲಾಗಿದ್ದು, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಅಗತ್ಯವಿರುವ ಕಡೆಗಳಲ್ಲಿ ಅಂಡರ್ಪಾಸ್ಗಳನ್ನು ನಿರ್ಮಿಸುವ ಬಗ್ಗೆ ಸಚಿವ ಸೋಮಣ್ಣ ಅವರೊಂದಿಗೆ ಚರ್ಚಿಸಲಾಗಿದೆ. ಅಷ್ಟೇ ಅಲ್ಲದೆ, ಈ ಮಾರ್ಗದ ಪ್ರಮುಖ ನಿಲ್ದಾಣಗಳಾದ ಮದ್ದೂರು, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಸೇರಿದಂತೆ ಹಲವು ನಿಲ್ದಾಣಗಳನ್ನು ಆಧುನೀಕರಿಸಿ, ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.
ರಾಮನಗರ ಜನತೆಗೆ ಅನುಕೂಲ:
“ಒಡೆಯರ್ ಎಕ್ಸ್ಪ್ರೆಸ್ ರೈಲು ರಾಮನಗರದಲ್ಲಿ ನಿಲುಗಡೆ ಹೊಂದುವುದರಿಂದ ಈ ಭಾಗದ ಸಾವಿರಾರು ಜನರಿಗೆ ಮತ್ತು ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಬಗ್ಗೆ ಈಗಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರೊಂದಿಗೆ ಚರ್ಚಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಶೀಘ್ರದಲ್ಲೇ ಈ ನಿಲುಗಡೆಗೆ ಅಧಿಕೃತ ಚಾಲನೆ ಸಿಗಲಿದೆ,” ಎಂದು ಅವರು ಹೇಳಿದರು.
ಬದಲಾಗಲಿದೆ ರೈಲ್ವೆ ಚಿತ್ರಣ:
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಈ ಭಾಗದ ರೈಲು ನಿಲ್ದಾಣಗಳ ಅಭಿವೃದ್ಧಿ, ಹೆಚ್ಚುವರಿ ರೈಲುಗಳ ಸಂಚಾರ ಮತ್ತು ವಾಣಿಜ್ಯ ಚಟುವಟಿಕೆಗಳ ವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಸಾಮೂಹಿಕ ಸಾರಿಗೆಯನ್ನು ಬಲಪಡಿಸುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಗುರಿಯಾಗಿದೆ ಎಂದು ಸಚಿವರು ಪುನರುಚ್ಚರಿಸಿದರು.
ಮದ್ದೂರಿಗೆ ಸಿಗಲಿದೆ ಎರಡನೇ ರೈಲು ನಿಲ್ದಾಣ:
ಪಟ್ಟಣದ ರೈಲು ಪ್ರಯಾಣಿಕರ ದಶಕಗಳ ಬೇಡಿಕೆಗೆ ಕೇಂದ್ರ ಸಚಿವರುಗಳಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ವಿ. ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮದ್ದೂರು ಪಟ್ಟಣಕ್ಕೆ ಎರಡನೇ ರೈಲು ನಿಲ್ದಾಣದ ಅಗತ್ಯವನ್ನು ಮನಗಂಡು, ಈ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ರೈಲು ಪರಿವೀಕ್ಷಣೆ ವೇಳೆ ಮದ್ದೂರಿನಲ್ಲಿ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ಪ್ರಸ್ತುತ ಇರುವ ರೈಲು ನಿಲ್ದಾಣವು ಸುಮಾರು ನೂರು ವರ್ಷ ಹಳೆಯದಾಗಿದ್ದು, ಪಟ್ಟಣದ ಜನರಿಗೆ ದೂರದಲ್ಲಿದೆ. ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ಸುಸಜ್ಜಿತ ನಿಲ್ದಾಣದ ಅಗತ್ಯವಿದೆ,” ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವರಿಕೆ ಮಾಡಿಕೊಟ್ಟರು.
ಜಾಗ ಗುರುತಿಸಿದರೆ ತಕ್ಷಣ ಸಮೀಕ್ಷೆ:
ಕುಮಾರಸ್ವಾಮಿ ಹಾಗೂ ಸ್ಥಳೀಯ ಮುಖಂಡ ಡಿ.ಸಿ. ತಮ್ಮಣ್ಣ ಅವರ ಮನವಿಗೆ ಸ್ಪಂದಿಸಿದ ಸಚಿವ ವಿ. ಸೋಮಣ್ಣ, “ಹೊಸ ನಿಲ್ದಾಣಕ್ಕೆ ಸೂಕ್ತ ಜಾಗ ಗುರುತಿಸಿದರೆ ತಕ್ಷಣವೇ ಅಧಿಕಾರಿಗಳನ್ನು ಕಳಿಸಿ ಸಮೀಕ್ಷೆ ಮಾಡಿಸಲಾಗುವುದು. ಇನ್ನು ನಾಲ್ಕೈದು ದಿನಗಳಲ್ಲಿ ಹಿರಿಯ ಅಧಿಕಾರಿಗಳ ತಂಡ ಮದ್ದೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ,” ಎಂದು ತಿಳಿಸಿದರು.
ಆರು ತಿಂಗಳಲ್ಲಿ ಹಳೆಯ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ:
ಇದೇ ಸಂದರ್ಭದಲ್ಲಿ ಹಳೆಯ ನಿಲ್ದಾಣದ ಬಗ್ಗೆ ಮಾತನಾಡಿದ ಸೋಮಣ್ಣ, “ಈಗಿರುವ ಐತಿಹಾಸಿಕ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಸಂಪೂರ್ಣವಾಗಿ ಆಧುನೀಕರಿಸಲಾಗುವುದು. ಮುಂದಿನ ಆರು ತಿಂಗಳೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ನಾವೇ ಬಂದು ಉದ್ಘಾಟನೆ ಮಾಡುತ್ತೇವೆ,” ಎಂದರು.
ಅಲ್ಲದೆ, ಮದ್ದೂರಿನಲ್ಲಿ ಕೆಲವು ಪ್ರಮುಖ ರೈಲುಗಳ ನಿಲುಗಡೆಗೆ ಇರುವ ಬೇಡಿಕೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ರೈಲ್ವೆ ಸಚಿವರು ಆಶ್ವಾಸನೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಜನತೆಗೆ ಮಾಹಿತಿ ನೀಡಿದರು.

