ಬೆಂಗಳೂರು: “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ನ್ಯಾಯದ ಮೇಲೆ ನಿಜವಾದ ಕಾಳಜಿಯಿಲ್ಲ. ಕೇವಲ ರಾಜಕೀಯ ಲಾಭಕ್ಕಾಗಿ ಅವರು ಸಾಮಾಜಿಕ ನ್ಯಾಯದ ಜಪ ಮಾಡುತ್ತಿದ್ದಾರೆ” ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನೇರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಆಯೋಜಿಸಲಾಗಿದ್ದ ‘ಗ್ರೇಟರ್ ಬೆಂಗಳೂರು ಜೆಡಿಎಸ್ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಎಂ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ತಮ್ಮ ರಾಜಕೀಯ ಭವಿಷ್ಯವನ್ನು ರೂಪಿಸಿಕೊಳ್ಳಲು ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯವನ್ನು ಒಂದು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ತಾವು ನಿಜವಾಗಿಯೂ ಸಾಮಾಜಿಕ ನ್ಯಾಯದ ಪರ ಇದ್ದೇನೆಯೇ ಎಂಬುದನ್ನು ಅವರು ಒಮ್ಮೆ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲಿ” ಎಂದು ಸವಾಲು ಹಾಕಿದರು.
ಬಿಜೆಪಿ ಮೈತ್ರಿಗೆ ಕಾರಣ ಬಿಚ್ಚಿಟ್ಟ ದೊಡ್ಡಗೌಡರು:
ಹಿಂದೆ ಕುಮಾರಸ್ವಾಮಿ ಅವರ ಸರ್ಕಾರವನ್ನು ಬೀಳಿಸಲು ಅಹಿಂದ ನಾಯಕರು ಸಂಚು ರೂಪಿಸಿದ್ದರು. ಜೆಡಿಎಸ್ ಪಕ್ಷವನ್ನೇ ಮುಗಿಸಲು ವ್ಯವಸ್ಥಿತ ಹುನ್ನಾರ ನಡೆದಾಗ, ಅಂತಹ ಶಕ್ತಿಗಳಿಗೆ ಪಾಠ ಕಲಿಸಲು ನಾನೇ ಖುದ್ದಾಗಿ ಕುಮಾರಸ್ವಾಮಿ ಅವರಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಸೂಚಿಸಿದೆ ಎಂದು ಗೌಡರು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವರಿಗೆ ರಾಜ್ಯದ ಅಸಹಕಾರ:
“ಕೇಂದ್ರ ಸಚಿವರಾಗಿ ಹೆಚ್.ಡಿ. ಕುಮಾರಸ್ವಾಮಿ ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಅವರಿಗೆ ಸಹಕಾರ ನೀಡುತ್ತಿಲ್ಲ. ಹೆಚ್‌ಎಂಟಿ ಹಾಗೂ ಕುದುರೆಮುಖ ಕಂಪನಿಗಳ ವಿಚಾರದಲ್ಲಿ ಅನಗತ್ಯ ತೊಂದರೆ ನೀಡುವ ಮೂಲಕ ರಾಜ್ಯದ ಹಿತದೃಷ್ಟಿಯಲ್ಲೂ ರಾಜಕೀಯ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ಕಾಂಗ್ರೆಸ್ ವಿಶ್ವಾಸದ್ರೋಹವೇ ಎನ್‌ಡಿಎ ಸೇರಲು ಕಾರಣ:
ಬಿಹಾರದಲ್ಲಿ ನಿತೀಶ್ ಕುಮಾರ್ ಅವರಿಗೆ ಪ್ರಧಾನಿ ಮೋದಿ ಶಕ್ತಿ ತುಂಬಿ ನಂಬಿಕೆಯಿಂದ ನಡೆಸಿಕೊಳ್ಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ನಮಗೆ ವಿಶ್ವಾಸದ್ರೋಹ ಮಾಡಿತು. ಆ ಕಹಿ ಘಟನೆಗಳನ್ನು ಮರೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ನ ಇಂತಹ ನಡವಳಿಕೆಯಿಂದಲೇ ಅನಿವಾರ್ಯವಾಗಿ ಜೆಡಿಎಸ್ ಇಂದು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ ಎಂದು ದೇವೇಗೌಡರು ವಿವರಿಸಿದರು.
ಈ ಸಂದರ್ಭದಲ್ಲಿ ಹಳೆಯ ಘಟನೆಯೊಂದನ್ನು ಸ್ಮರಿಸಿದ ದೇವೇಗೌಡರು, “ನಾವು ಈ ಹಿಂದೆ ಮುಸ್ಲಿಂ ಅಭ್ಯರ್ಥಿಯೊಬ್ಬರನ್ನು ಗೆಲ್ಲಿಸಲು ‘ದರಿದ್ರ ನಾರಾಯಣ ರ್ಯಾಲಿ’ಯನ್ನು ಹಮ್ಮಿಕೊಂಡಿದ್ದೆವು. ಆದರೆ ಅಂದು ಇವತ್ತಿನ ಅಹಿಂದ ನಾಯಕ ಸಿದ್ದರಾಮಯ್ಯ ಅವರು ಆ ಸಮಾವೇಶಕ್ಕೆ ಬರಲೇ ಇಲ್ಲ. ವೇದಿಕೆಯ ಕಾರ್ಯಕ್ರಮವೆಲ್ಲಾ ಮುಗಿಯುವ ಕೊನೆ ಹಂತದಲ್ಲಿ ಅವರು ಆಗಮಿಸಿದರು. ಇದು ಅವರಿಗಿರುವ ಸಾಮಾಜಿಕ ನ್ಯಾಯದ ಕಾಳಜಿಯನ್ನು ತೋರಿಸುತ್ತದೆ” ಎಂದು ಕಿಡಿಕಾರಿದರು. ರಾಜ್ಯದಲ್ಲಿ ಸಾಮಾಜಿಕ ನ್ಯಾಯಕ್ಕೆ ಶಕ್ತಿ ತುಂಬಿದವನು ನಾನು, ಇದರ ಬಗ್ಗೆ ಯಾವುದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

