ಬೆಂಗಳೂರು: ರಾಜ್ಯದಲ್ಲಿ ಹೋಮಿಯೋಪತಿ ಚಿಕಿತ್ಸಾ ಪದ್ಧತಿಯನ್ನು ಮತ್ತಷ್ಟು ಬಲಪಡಿಸಲು ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಶೀಘ್ರದಲ್ಲೇ ಹೊಸ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.
ಕರ್ನಾಟಕ ಹೋಮಿಯೋಪಥಿಕ್ ಅಸೋಸಿಯೇಷನ್ ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸಭಾಂಗಣದಲ್ಲಿ ಆಯೋಜಿಸಿದ್ದ ‘ವಿಶ್ವ ಹೋಮಿಯೋಪತಿ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹೋಮಿಯೋಪತಿ ವೈದ್ಯಕೀಯ ಕಾಲೇಜು ನಿರ್ಮಾಣವು ಈ ಭಾಗದ ವೈದ್ಯಕೀಯ ವಿದ್ಯಾರ್ಥಿಗಳ ದಶಕಗಳ ಬೇಡಿಕೆಯಾಗಿದೆ. ಈ ಬಗ್ಗೆ ಪ್ರಸ್ತಾಪಿಸಿದ ಸಚಿವರು, “ಸರ್ಕಾರವು ಹೋಮಿಯೋಪತಿ ಕಾಲೇಜು ಸ್ಥಾಪನೆಗೆ ಬದ್ಧವಾಗಿದೆ. ಈ ಕುರಿತು ಎದುರಾಗಿರುವ ತಾಂತ್ರಿಕ ಸಮಸ್ಯೆಗಳು ಹಾಗೂ ನಿಮ್ಮ ಇತರೆ ಬೇಡಿಕೆಗಳ ಬಗ್ಗೆ ಮುಂಬರುವ ದಿನಗಳಲ್ಲಿ ವಿಸ್ತೃತವಾಗಿ ಚರ್ಚಿಸಿ, ಶೀಘ್ರದಲ್ಲೇ ಕಾಲೇಜು ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಶೋಧನೆ ಮತ್ತು ಪ್ರಯೋಗಕ್ಕೆ ಒತ್ತು:
“ಹೋಮಿಯೋಪತಿಯು 200 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ವಿಜ್ಞಾನವಾಗಿದ್ದು, ಇಂದು ಇದು ಕೇವಲ ಪರ್ಯಾಯ ಚಿಕಿತ್ಸೆಯಾಗಿ ಉಳಿದಿಲ್ಲ. ಸರ್ಕಾರವು ಈಗಾಗಲೇ 60-70 ಡಿಸ್ಪೆನ್ಸರಿಗಳನ್ನು ನಡೆಸುತ್ತಿದೆ. ಆದರೆ ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆ ಹಾಗೂ ಪ್ರಯೋಗಗಳು ನಡೆಯಬೇಕಿದೆ. ಆಗ ಮಾತ್ರ ಜನರಲ್ಲಿ ಈ ಪದ್ಧತಿಯ ಬಗ್ಗೆ ಇನ್ನಷ್ಟು ಗಾಢವಾದ ನಂಬಿಕೆ ಮೂಡಲು ಸಾಧ್ಯ,” ಎಂದು ಅವರು ತಿಳಿಸಿದರು.
ಬೋರ್ಡ್ ಚುನಾವಣೆ ಸಮಸ್ಯೆ ಇತ್ಯರ್ಥ:
ಹೋಮಿಯೋಪತಿ ಬೋರ್ಡ್ ಚುನಾವಣೆಗೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಹಲವು ಮನವಿಗಳನ್ನು ಸ್ವೀಕರಿಸಿದ ಸಚಿವರು, ಇಲಾಖೆಯು ಮುಕ್ತ ಮಾತುಕತೆಗೆ ಸದಾ ಸಿದ್ಧವಿದ್ದು, ಎಲ್ಲಾ ಆಡಳಿತಾತ್ಮಕ ತೊಡಕುಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಲಕ್ಷ್ಮೀಕಾಂತ ನಂದಾ, ಆಯುಷ್ ಇಲಾಖೆ ಆಯುಕ್ತ ಡಾ. ಸುನಿಲ್ ಪನ್ವರ್ ಹಾಗೂ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

