Sat. Jun 6th, 2026

ಮಂಡ್ಯದಲ್ಲಿ ಜಾಗತಿಕ ಮಟ್ಟದ ‘ARAI’ ಕೇಂದ್ರ: ಮೇ ತಿಂಗಳಲ್ಲಿ ಭೂಮಿ ಪೂಜೆ: ಹೆಚ್.ಡಿ. ಕುಮಾರಸ್ವಾಮಿ

Share this with Friends

ಬೆಂಗಳೂರು: ಮಂಡ್ಯ ಜಿಲ್ಲೆಯ ಕೈಗಾರಿಕಾ ಚಿತ್ರಣವನ್ನೇ ಬದಲಿಸಬಲ್ಲ ಮಹತ್ವಾಕಾಂಕ್ಷೆಯ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಪರೀಕ್ಷಾ ಕೇಂದ್ರದ ಸ್ಥಾಪನೆಗೆ ಕೇಂದ್ರ ಸರ್ಕಾರ ವೇಗ ನೀಡಿದ್ದು, ಮೇ ತಿಂಗಳಿನಲ್ಲಿ ಯೋಜನೆಯ ಭೂಮಿ ಪೂಜೆ ನೆರವೇರಿಸುವ ಕುರಿತು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ವಿಧಾನಸೌಧದಲ್ಲಿ ರಾಜ್ಯದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದರು.ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ವಿಧಾನಸೌಧಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರು, ಮಂಡ್ಯ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಹಾಗೂ ರಾಜ್ಯದ ಉದ್ಯಮ ರಂಗಕ್ಕೆ ಹೊಸ ವೇಗ ನೀಡುವ ಬಗ್ಗೆ ವಿಸ್ತೃತ ಸಮಾಲೋಚನೆ ನಡೆಸಿದರು.

ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಸ್ತುತ ದೇಶದಲ್ಲಿ ಕೇವಲ ನಾಲ್ಕು ಕಡೆ ಮಾತ್ರ ಇಂತಹ ಕೇಂದ್ರಗಳಿದ್ದು, ಐದನೇ ಕೇಂದ್ರವನ್ನು ಕರ್ನಾಟಕದ ಮಂಡ್ಯದಲ್ಲಿ ಆರಂಭಿಸಲು ಪ್ರಯತ್ನ ನಡೆಸಿದ್ದೇವೆ.”ಈ ಟೆಸ್ಟಿಂಗ್ ಕೇಂದ್ರವು ಅಂತಾರಾಷ್ಟ್ರೀಯ ಮಟ್ಟದ್ದಾಗಿರಲಿದ್ದು, ವಿಶೇಷವಾಗಿ ಎಲೆಕ್ಟ್ರಿಕ್ ವಾಹನ (EV) ಉದ್ಯಮಕ್ಕೆ ದೊಡ್ಡ ಶಕ್ತಿ ನೀಡಲಿದೆ. ಮಂಡ್ಯದಲ್ಲಿ ಕೈಗಾರಿಕಾ ಜಾಗ ಹಂಚಿಕೆ ಕುರಿತು ಈಗಾಗಲೇ ಪ್ರಾಥಮಿಕ ಚರ್ಚೆಗಳಾಗಿವೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ,” ಎಂದು ತಿಳಿಸಿದರು.

500 ಎಕರೆ ಭೂಮಿಯ ಅಗತ್ಯ:

“ನನ್ನ ಲೋಕಸಭಾ ಕ್ಷೇತ್ರವಾದ ಮಂಡ್ಯದ ಜನತೆಯ ಋಣ ತೀರಿಸುವ ಉದ್ದೇಶ ನನ್ನದಾಗಿದೆ. ಈ ಬೃಹತ್ ಕೇಂದ್ರದ ಸ್ಥಾಪನೆಗೆ ಸುಮಾರು 500 ರಿಂದ 600 ಎಕರೆ ಭೂಮಿಯ ಅಗತ್ಯವಿದೆ. ಈಗಾಗಲೇ ಎರಡು-ಮೂರು ಜಾಗಗಳನ್ನು ಪರಿಶೀಲಿಸಲಾಗಿದ್ದು, ಅಲ್ಲಿನ ಜಾಗ ಸೀಮಿತವಾಗಿದೆ. ಹೆಚ್ಚಿನ ಜಾಗ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇನೆ,” ಎಂದು ತಿಳಿಸಿದರು.

ಏಪ್ರಿಲ್ 30ರ ಗಡುವು:

ಯೋಜನೆಯ ಜಾರಿಗೆ ಭೂಮಿಯ ಲಭ್ಯತೆ ಅತ್ಯಗತ್ಯವಾಗಿದ್ದು, ಏಪ್ರಿಲ್ 30ರ ಒಳಗಾಗಿ ಜಾಗದ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ರಾಜ್ಯ ಸಚಿವರಿಗೆ ಕೋರಲಾಗಿದೆ. “ರಾಜ್ಯ ಸರ್ಕಾರ ಉತ್ತಮ ಸಹಕಾರ ನೀಡಿದರೆ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಕೈಗಾರಿಕೆಗಳನ್ನು ತರಲು ಸಾಧ್ಯವಿದೆ. ಮಂಡ್ಯ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಅಲ್ಲಿ ಒಣ ಭೂಮಿಯ ಲಭ್ಯತೆ ಕಡಿಮೆ ಇದೆ. ಆದರೂ 500 ಎಕರೆ ಸರ್ಕಾರಿ ಭೂಮಿ ಗುರುತಿಸಲಾಗಿದ್ದು, ಅಲ್ಲಿನ ರೈತರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ನೀಡಿ ಭೂಮಿ ಪಡೆಯುವ ಬಗ್ಗೆ ಚರ್ಚಿಸಲಾಗಿದೆ,” ಎಂದು ಅವರು ವಿವರಿಸಿದರು.

ಬಜೆಟ್ ಘೋಷಣೆ ಮತ್ತು ಪೂರಕ ವ್ಯವಸ್ಥೆ:

ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಈ ಯೋಜನೆಗೆ 100 ಎಕರೆ ನೀಡುವುದಾಗಿ ಘೋಷಿಸಿದ್ದರು. ಆದರೆ, ಅಂತರಾಷ್ಟ್ರೀಯ ಮಟ್ಟದ ಟೆಸ್ಟಿಂಗ್ ಕೇಂದ್ರಕ್ಕೆ ಹೆಚ್ಚಿನ ಜಾಗದ ಅಗತ್ಯವಿದೆ. ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ ಎರಡೂ ಸಮಾನಾಂತರವಾಗಿ ಸಾಗಬೇಕು ಎಂಬುದು ಕೇಂದ್ರದ ಗುರಿಯಾಗಿದೆ. ಎಂ.ಬಿ. ಪಾಟೀಲ್ ಅವರು ಈ ವಿಷಯದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರವೇ ಭೂಮಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದರು.

ಸಭೆಯ ನಂತರ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್ ಅವರು, ರಾಜ್ಯದ ಕೈಗಾರಿಕಾ ಪ್ರಗತಿಗೆ ಕೇಂದ್ರದೊಂದಿಗೆ ಸಹಕರಿಸಲು ಸಿದ್ಧವಿರುವುದಾಗಿ ತಿಳಿಸಿದರು. ಈ ಯೋಜನೆಯು ಜಾರಿಗೆ ಬಂದಲ್ಲಿ ಮಂಡ್ಯ ಭಾಗದ ಸಾವಿರಾರು ಯುವಕರಿಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.

 


Share this with Friends

Related Post