ಎನ್.ಆರ್ ಪುರ (ಚಿಕ್ಕಮಗಳೂರು): “ದೇಶದ ಜಿಡಿಪಿ ದರಕ್ಕಿಂತ ರಾಜ್ಯದ ಜಿಡಿಪಿ ಅಧಿಕವಾಗಿದ್ದು, ಕರ್ನಾಟಕದ ಆರ್ಥಿಕ ಸ್ಥಿತಿ ಅತ್ಯಂತ ಸದೃಢವಾಗಿದೆ. ಆದರೆ ಬಿಜೆಪಿಯವರು ರಾಜ್ಯದ ಆರ್ಥಿಕತೆ ಬಗ್ಗೆ ಅಪಪ್ರಚಾರ ಮಾಡುತ್ತಾ ಸುಳ್ಳನ್ನೇ ಮನೆದೇವ್ರು ಮಾಡಿಕೊಂಡಿದ್ದಾರೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಎನ್.ಆರ್ ಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ರಾಜ್ಯದ ಪ್ರಗತಿಯ ಕುರಿತು ಅಂಕಿಅಂಶಗಳ ಸಹಿತ ವಾಗ್ದಾಳಿ ನಡೆಸಿದರು.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ:
“ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ತನ್ನ 2023-24ರ ಬಜೆಟ್‌ನಲ್ಲಿ 5,300 ಕೋಟಿ ರೂ. ಘೋಷಿಸಿತ್ತು. ಆದರೆ ಈವರೆಗೆ ಒಂದು ಪೈಸೆ ಅನುದಾನವನ್ನೂ ಬಿಡುಗಡೆ ಮಾಡದೆ ರಾಜ್ಯದ ಜನರಿಗೆ ದ್ರೋಹ ಎಸಗಿದೆ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ್ದ ಅನುದಾನವನ್ನೂ ನೀಡದೆ ಅನ್ಯಾಯ ಮಾಡಲಾಗಿದೆ. ಪ್ರಧಾನಿ ಮೋದಿ ನೀಡಿದ್ದ ಯಾವ ಭರವಸೆಗಳೂ ಈಡೇರಲಿಲ್ಲ, ಜನರ ಪಾಲಿಗೆ ‘ಒಳ್ಳೆಯ ದಿನಗಳು’ ಬರಲೇ ಇಲ್ಲ” ಎಂದು ಸಿಎಂ ಕಿಡಿಕಾರಿದರು.
ಅಂಕಿಅಂಶಗಳ ಮೂಲಕ ತಿರುಗೇಟು:
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಶ್ವೇತಪತ್ರದ ಬೇಡಿಕೆಗೆ ಉತ್ತರಿಸಿದ ಅವರು, “ಕೇಂದ್ರದ ಜಿಡಿಪಿ ದರ 7.14 ರಷ್ಟಿದ್ದರೆ, ರಾಜ್ಯದ ಜಿಡಿಪಿ 8.1 ರಷ್ಟಿದೆ. ದೇಶದ ಸಾಲದ ಮೊತ್ತ 53 ಲಕ್ಷ ಕೋಟಿಯಿಂದ ಮೋದಿಯವರ ಕಾಲದಲ್ಲಿ 218 ಲಕ್ಷ ಕೋಟಿಗೆ ಏರಿಕೆಯಾಗಿದೆ. ನಮ್ಮ ಆರ್ಥಿಕತೆ ಹೊಣೆಗಾರಿಕೆ ಕಾಯ್ದೆಯ ಮಾನದಂಡಗಳಿಗೂ ಪೂರಕವಾಗಿಯೇ ಇದೆ. ಬಜೆಟ್ ಅಂಶಗಳನ್ನು ಓದದೆ ವಿರೋಧ ಪಕ್ಷದವರು ಕೇವಲ ಪ್ರಚಾರಕ್ಕಾಗಿ ಟೀಕೆ ಮಾಡುತ್ತಿದ್ದಾರೆ” ಎಂದರು.
ಗ್ಯಾರಂಟಿ ನಮ್ಮ ಹೆಮ್ಮೆ:
“ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಈವರೆಗೆ ಗ್ಯಾರಂಟಿ ಯೋಜನೆಗಳಿಗೆ 1.30 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗಿದೆ. ನಮ್ಮ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ನಮ್ಮನ್ನೇ ಅನುಸರಿಸುತ್ತಿದ್ದಾರೆ. ಈ ಭಾಗದ ಜನರ ಬೇಡಿಕೆಯಂತೆ ರಸ್ತೆ ಅಗಲೀಕರಣ, ಬ್ಯಾರೇಜ್ ನಿರ್ಮಾಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಅವರು ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳೂ ಅಭಿವೃದ್ಧಿಯ ಭಾಗ; ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಸವಲತ್ತುಗಳಲ್ಲ, ಅವು ಜನಕಲ್ಯಾಣದ ದೃಷ್ಟಿಯಿಂದ ಒಂದು ವಿಧದ ಅಭಿವೃದ್ಧಿಯೇ ಆಗಿವೆ. ಈ ಯೋಜನೆಗಳ ನಡುವೆಯೂ ರಾಜ್ಯದ ಆರ್ಥಿಕ ಪರಿಸ್ಥಿತಿ ಕೇಂದ್ರ ಸರ್ಕಾರಕ್ಕಿಂತ ಉತ್ತಮವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.”ಗ್ಯಾರಂಟಿಗಳಿಂದಾಗಿ ರಾಜ್ಯದ ಖಜಾನೆ ಖಾಲಿಯಾಗಿದೆ, ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ಆದರೆ, ಇಂದು 36 ಕೋಟಿ ರೂ. ವೆಚ್ಚದ ಸೇತುವೆ ಸೇರಿದಂತೆ ಹಲವು ಕಾಮಗಾರಿಗಳಿಗೆ ಚಾಲನೆ ನೀಡುವ ಮೂಲಕ ನಾವು ಅಭಿವೃದ್ಧಿ ಮತ್ತು ಗ್ಯಾರಂಟಿ ಎರಡನ್ನೂ ಸಮಾನವಾಗಿ ಮುನ್ನಡೆಸುತ್ತಿದ್ದೇವೆ” ಎಂದು ಅವರು ವಿರೋಧಿಗಳಿಗೆ ತಿರುಗೇಟು ನೀಡಿದರು.
ಸಂವಿಧಾನದ ಆಶಯ:
ಸಮಸಮಾಜದ ನಿರ್ಮಾಣವೇ ಸಂವಿಧಾನದ ಮುಖ್ಯ ಆಶಯವಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ, ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಶಕ್ತಿ ನೀಡುವ ಮೂಲಕ ಅಂಬೇಡ್ಕರ್ ಅವರ ಈ ಚಿಂತನೆಯನ್ನು ಸಾಕಾರಗೊಳಿಸುತ್ತಿವೆ ಎಂದು ಸಿಎಂ ತಿಳಿಸಿದರು

