Sat. Jun 6th, 2026

ಕನ್ನಡ ಬಾರದ ಚಾಲಕರ ಪರವಾನಗಿ ರದ್ದಾಗಲಿ,ನೆರೆ ರಾಜ್ಯಗಳ ಮಾದರಿ ಅನುಸರಿಸಿ; ಕರವೇ ಆಗ್ರಹ

Share this with Friends

ಬೆಂಗಳೂರು: ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳ ಮಾದರಿಯಲ್ಲಿ ಕರ್ನಾಟಕದಲ್ಲೂ ಕನ್ನಡ ಬಾರದ ಹಾಗೂ ಕನ್ನಡದಲ್ಲಿ ವ್ಯವಹರಿಸದ ವಲಸಿಗ ಚಾಲಕರ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು,ಮಹಾರಾಷ್ಟ್ರ ಸರ್ಕಾರವು ತನ್ನ ನೆಲದ ಭಾಷಾ ಹಿತಾಸಕ್ತಿ ಕಾಪಾಡಲು ಮಹತ್ವದ ಹೆಜ್ಜೆಯಿರಿಸಿದ್ದು, ಮರಾಠಿ ಭಾಷೆ ತಿಳಿಯದ ಟ್ಯಾಕ್ಸಿ ಮತ್ತು ಆಟೋ ಚಾಲಕರ ಪರವಾನಗಿ ರದ್ದುಗೊಳಿಸಲು ದೃಢ ನಿರ್ಧಾರ ಕೈಗೊಂಡಿದೆ. ಈ ನಿಯಮವು ಮೇ 1ರ ಮಹಾರಾಷ್ಟ್ರ ದಿನಾಚರಣೆಯಂದು ಕಟ್ಟುನಿಟ್ಟಾಗಿ ಜಾರಿಗೆ ಬರಲಿದ್ದು, ಸಾರಿಗೆ ಇಲಾಖೆಯು ಈಗಾಗಲೇ ರಾಜ್ಯಾದ್ಯಂತ ತಪಾಸಣೆ ಆರಂಭಿಸಿದೆ.ಆ ರಾಜ್ಯದ 59 ಆರ್‌ಟಿಒ ಕಚೇರಿಗಳ ವ್ಯಾಪ್ತಿಯಲ್ಲಿ ಇನ್ಮುಂದೆ ಚಾಲಕರಿಗೆ ಮರಾಠಿ ಭಾಷೆ ಪರೀಕ್ಷೆ ಎದುರಾಗಲಿದೆ. ಮರಾಠಿ ಓದಲು, ಬರೆಯಲು ಮತ್ತು ಸುಲಲಿತವಾಗಿ ಮಾತನಾಡಲು ಬಾರದಿದ್ದರೆ ಅಂತಹ ಚಾಲಕರ ಪರವಾನಗಿಯನ್ನು ಸಾರಿಗೆ ಇಲಾಖೆ ಮುಲಾಜಿಲ್ಲದೆ ರದ್ದುಗೊಳಿಸುತ್ತಿದೆ. ಸಂವಹನ ಕೊರತೆಯಿಂದ ಪ್ರಯಾಣಿಕರಿಗೆ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಮತ್ತು ಸ್ಥಳೀಯ ಭಾಷಾ ಅಸ್ಮಿತೆ ಕಾಪಾಡಲು ಈ ಕ್ರಮ ಅನಿವಾರ್ಯ ಎಂದು ಅಲ್ಲಿನ ಸರ್ಕಾರ ಪ್ರತಿಪಾದಿಸಿದೆ ಎಂದರು.

ಕರವೇ ಸ್ವಾಗತ:

ಮಹಾರಾಷ್ಟ್ರ ಸರ್ಕಾರದ ಈ ಧೈರ್ಯದ ನಿರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಗತಿಸುತ್ತಿದೆ. “ಜೀವನಾಧಾರಕ್ಕಾಗಿ ಒಂದು ರಾಜ್ಯದ ಮಣ್ಣು, ನೀರು ಅವಲಂಬಿಸುವವರು ಅಲ್ಲಿನ ಭಾಷೆ ಕಲಿಯುವುದು ಮೂಲಭೂತ ಕರ್ತವ್ಯ. ಅನ್ಯ ರಾಜ್ಯಗಳಿಂದ ವಲಸೆ ಬರುವವರು ಸ್ಥಳೀಯ ಜನರೊಂದಿಗೆ ಬೆರೆಯಲು ಭಾಷೆ ಕಲಿಯುವುದು ನೈತಿಕ ಜವಾಬ್ದಾರಿಯೂ ಹೌದು” ಎಂದು ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಲಸಿಗ ಚಾಲಕರಿಂದ ಕನ್ನಡಿಗರಿಗೆ ಸಂಕಷ್ಟ:

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಕನ್ನಡ ಬಾರದ ಚಾಲಕರಿಂದ ಸಾರ್ವಜನಿಕರು ನಿರಂತರವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಸಂವಹನದ ಕೊರತೆಯಿಂದಾಗಿ ಪ್ರಯಾಣಿಕರಿಗೆ ತಪ್ಪು ದಾರಿ ತೋರಿಸುವುದು, ಮೀಟರ್ ದರದ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಮತ್ತು ಸಾರ್ವಜನಿಕರೊಂದಿಗೆ ಉದ್ಧಟತನದಿಂದ ವರ್ತಿಸುವ ಘಟನೆಗಳು ಹೆಚ್ಚುತ್ತಿವೆ. ಇದು ಕೇವಲ ವ್ಯವಹಾರದ ಸಮಸ್ಯೆಯಾಗಿ ಉಳಿಯದೆ, ಕನ್ನಡಿಗರ ಆತ್ಮಗೌರವಕ್ಕೆ ಧಕ್ಕೆ ತರುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ನೆರೆ ರಾಜ್ಯಗಳ ಕಟ್ಟುನಿಟ್ಟಿನ ನೀತಿ:

ತಮಿಳುನಾಡು ಮಾದರಿ: ತಮಿಳುನಾಡಿನಲ್ಲಿ ಚಾಲನಾ ಪರವಾನಗಿ ನೀಡುವಾಗ ಅಥವಾ ನವೀಕರಿಸುವಾಗ ತಮಿಳು ಭಾಷೆಯ ಕನಿಷ್ಠ ಜ್ಞಾನವನ್ನು ಪರೀಕ್ಷಿಸುವ ನಿಯಮ ದೀರ್ಘಕಾಲದಿಂದ ಜಾರಿಯಲ್ಲಿದೆ. ಚಾಲಕರು ಪ್ರಯಾಣಿಕರೊಂದಿಗೆ ತಮಿಳಿನಲ್ಲೇ ವ್ಯವಹರಿಸುವುದು ಅಲ್ಲಿ ಕಡ್ಡಾಯವಾಗಿದೆ.

ಮಹಾರಾಷ್ಟ್ರದ ದೃಢ ನಿರ್ಧಾರ: ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರವು ಮರಾಠಿ ಬಾರದ ಚಾಲಕರ ಪರವಾನಗಿ ರದ್ದುಗೊಳಿಸುವ ಕಠಿಣ ತೀರ್ಮಾನ ಕೈಗೊಂಡಿದ್ದು, ಈ ಮಾದರಿಯನ್ನು ಕರ್ನಾಟಕ ಸರ್ಕಾರವೂ ತಕ್ಷಣವೇ ಜಾರಿಗೆ ತರಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಭಾಷೆಯೇ ನಮ್ಮ ಅಸ್ಮಿತೆ:

“ಭಾಷೆ ಎನ್ನುವುದು ಕೇವಲ ಸಂವಹನಕ್ಕೆ ಸೀಮಿತವಲ್ಲ; ಅದು ನಮ್ಮ ಅಸ್ಮಿತೆ, ಬದುಕು ಮತ್ತು ಸಂಸ್ಕೃತಿಯ ಸಂಕೇತ. ಯಾವುದೇ ರಾಜ್ಯದಲ್ಲಿ ವ್ಯವಹಾರ ಮಾಡುವವರು ಆ ನೆಲದ ಭಾಷೆಯನ್ನು ಕಲಿಯುವುದು ಮತ್ತು ಗೌರವಿಸುವುದು ಅನಿವಾರ್ಯ. ಹೀಗಾಗಿ, ಕನ್ನಡ ಬಾರದ ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸ್ಪಷ್ಟ ನಿಯಮಾವಳಿಗಳನ್ನು ಸಾರಿಗೆ ಇಲಾಖೆ ರೂಪಿಸಬೇಕು” ಎಂದು ನಾರಾಯಣಗೌಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಈ ಕೂಡಲೇ ಎಚ್ಚೆತ್ತುಕೊಂಡು ಕನ್ನಡದ ಹಿತಾಸಕ್ತಿ ಕಾಪಾಡಲು ಮುಂದಾಗಬೇಕು ಎಂಬುದು ಎಂದು ಆಗ್ರಹಿಸಿದ್ದಾರೆ.

 


Share this with Friends

Related Post