ದಾವಣಗೆರೆ: ಜಿಲ್ಲೆಯ ರಾಜಕಾರಣದಲ್ಲಿ ಕಾಂಗ್ರೆಸ್ ಆಂತರಿಕ ಭಿನ್ನಮತ ತಾರಕಕ್ಕೇರಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತೆ ಎನ್ನಲಾದ ಯುವ ಕಾಂಗ್ರೆಸ್ ನಾಯಕಿ ಅಫ್ರೀನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣಾ ಟಿಕೆಟ್ ಹಂಚಿಕೆ ವಿಚಾರದಲ್ಲಿ ಶುರುವಾದ ಈ ‘ಕೈ’ ಕದನ ಈಗ ಶಿಸ್ತು ಕ್ರಮದ ಹಂತಕ್ಕೆ ತಲುಪಿದೆ.
ವಿಡಿಯೋ ಕಿಡಿ, ಉಚ್ಚಾಟನೆ ಅಸ್ತ್ರ:
ಬೆಂಗಳೂರು ಉತ್ತರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷೆಯಾಗಿದ್ದ ಅಫ್ರೀನ್ ಖಾನ್ ಅವರು, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಿರಿಯ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಗುರಿಯಾಗಿಸಿ ‘ಮೀರ್ ಸಾದಿಕ್’ ಎಂದು ಟೀಕಿಸಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಪಕ್ಷದ ನಾಯಕರ ವಿರುದ್ಧದ ಈ ಬಹಿರಂಗ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಕೆಪಿಸಿಸಿ ಶಿಸ್ತು ಸಮಿತಿ, ಅಫ್ರೀನ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದೆ.
ಉಚ್ಚಾಟನೆಗೆ ತಿರುಗೇಟು:
ಈ ಕ್ರಮಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಫ್ರೀನ್ ಖಾನ್, “ನಾನು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ನೀಡಿದ ಮೇಲೆ ಉಚ್ಚಾಟನೆ ಮಾಡುವುದು ಹಾಸ್ಯಾಸ್ಪದ” ಎಂದು ವ್ಯಂಗ್ಯವಾಡಿದ್ದಾರೆ. ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ನಾಯಕರಿಗೆ ಟಿಕೆಟ್ ಕೈತಪ್ಪಿದ ವಿಚಾರವಾಗಿ ಅವರು ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.
ಮುಂದುವರಿದ ಶುದ್ಧೀಕರಣ:
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ವಿರುದ್ಧ ಕೆಲಸ ಮಾಡುತ್ತಿರುವ ಅಥವಾ ತಟಸ್ಥರಾಗಿ ಉಳಿದಿರುವ ಜಮೀರ್ ಬೆಂಬಲಿಗರನ್ನು ಹೈಕಮಾಂಡ್ ಹಂತಹಂತವಾಗಿ ಪಕ್ಕಕ್ಕೆ ಸರಿಸುತ್ತಿದೆ. ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅಮಾನತಾದ ಬೆನ್ನಲ್ಲೇ ಅಫ್ರೀನ್ ಖಾನ್ ಅವರ ಉಚ್ಚಾಟನೆಯೂ ನಡೆದಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

