Sat. Jun 6th, 2026

ಮಹಿಳಾ ಮೀಸಲಾತಿ ವಿಷಯದಲ್ಲಿ ಪ್ರತಿಪಕ್ಷಗಳಿಂದ ಉತ್ತರ-ದಕ್ಷಿಣ ವಿಭಜನೆ ರಾಜಕಾರಣ:ಬಸವರಾಜ ಬೊಮ್ಮಾಯಿ ಆರೋಪ

Share this with Friends

ನವದೆಹಲಿ: ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ವಿಷಯದಲ್ಲಿ ಪ್ರತಿಪಕ್ಷಗಳು ಅನಗತ್ಯವಾಗಿ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಭೇದಭಾವ ಸೃಷ್ಟಿಸಿ ರಾಜಕೀಯ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ದೆಹಲಿಯಲ್ಲಿ ಸುದಿನಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಧೇಯಕವು ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಸ್ಮರಣೀಯ ಮೈಲಿಗಲ್ಲು. ಪ್ರಧಾನಿ ನರೇಂದ್ರ ಮೋದಿಯವರು ಈ ಐತಿಹಾಸಿಕ ಬಿಲ್ ಸರ್ವಾನುಮತದಿಂದ ಅಂಗೀಕಾರವಾಗಬೇಕೆಂಬ ಆಶಯ ಹೊಂದಿದ್ದಾರೆ. ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಮಸೂದೆ ಈಗ ಅಂತಿಮ ಸ್ವರೂಪ ಪಡೆದುಕೊಂಡಿದೆ. ಸಂವಿಧಾನದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಗಿದ್ದರೂ, ಅವರ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯ ದೊರೆತಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಕ್ಷೇತ್ರ ಮರುವಿಂಗಡಣೆ ಬಗ್ಗೆ ಸ್ಪಷ್ಟನೆ:

“ಡಿಲಿಮಿಟೇಷನ್ ಪ್ರಕ್ರಿಯೆಯಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯು ಶೇ. 50ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಆಯಾ ರಾಜ್ಯಗಳಲ್ಲಿ ಪ್ರಸ್ತುತ ಇರುವ ಸ್ಥಾನಗಳ ಆಧಾರದ ಮೇಲೆಯೇ ಈ ಹೆಚ್ಚಳವಾಗುವುದರಿಂದ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲ. 2011ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಡು ಪ್ರತಿ ಕ್ಷೇತ್ರಕ್ಕೆ ಎಷ್ಟು ಜನಸಂಖ್ಯೆ ಇರಬೇಕೆಂದು ನಿರ್ಧರಿಸಲಾಗುತ್ತದೆ. ಪ್ರತಿಪಕ್ಷಗಳು ಈ ಅಂಶ ಬಿಲ್‌ನಲ್ಲಿ ಮುದ್ರಿತವಾಗಿಲ್ಲ ಎಂದು ಜನರನ್ನು ಹಾದಿ ತಪ್ಪಿಸುತ್ತಿವೆ. ವಾಸ್ತವವಾಗಿ, ಡಿಲಿಮಿಟೇಷನ್ ಸಮಿತಿ ರಚನೆಯಾದ ನಂತರ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಈ ತಾಂತ್ರಿಕ ವಿವರಗಳನ್ನು ನಿರ್ಧರಿಸಲಾಗುತ್ತದೆ” ಎಂದು ಬೊಮ್ಮಾಯಿ ವಿವರಿಸಿದರು.

2008ರ ಕ್ಷೇತ್ರ ಮರುವಿಂಗಡಣೆಯ ಉದಾಹರಣೆ ನೀಡಿದ ಅವರು, ಅಂದು 543 ಸೀಟುಗಳ ಮಿತಿಯಲ್ಲೇ ಬದಲಾವಣೆ ಮಾಡಲಾಗಿತ್ತು. ಇದು ಮಸೂದೆಯಲ್ಲಿ ಅಲ್ಲ, ಸಮಿತಿಯ ಚರ್ಚೆಯಲ್ಲಿ ನಿರ್ಧಾರವಾಗುವ ವಿಷಯ. ಹೀಗಾಗಿ ಪ್ರತಿಪಕ್ಷಗಳು ಸುಳ್ಳು ಹರಡುವುದನ್ನು ಬಿಟ್ಟು, ಮಹಿಳಾ ಸಬಲೀಕರಣದ ಈ ಮಹತ್ವದ ನಿರ್ಧಾರಕ್ಕೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.

ತಮಿಳುನಾಡು ಸಿಎಂರಿಂದ ಕೆಟ್ಟ ರಾಜಕಾರಣ: 

ಮಹಿಳಾ ಮೀಸಲಾತಿ ಜಾರಿ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಕೆಟ್ಟ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ ಎಂದು ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. “ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಡಿಎಂಕೆ ನಾಯಕರು ಪ್ರಾದೇಶಿಕ ಭಾವನೆಗಳನ್ನು ಕೆರಳಿಸುತ್ತಿದ್ದಾರೆ. ಜನಗಣತಿ ನಂತರ ಡಿಲಿಮಿಟೇಷನ್ ನಡೆದರೆ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಂದು ವೇಳೆ ಅನ್ಯಾಯವಾದರೆ ಅದಕ್ಕೆ ಪ್ರತಿಪಕ್ಷಗಳೇ ನೇರ ಹೊಣೆ,” ಎಂದು ಎಚ್ಚರಿಸಿದರು.

2029ಕ್ಕೇ ಮೀಸಲಾತಿ ಜಾರಿ:

ಮಹಿಳಾ ಮೀಸಲಾತಿಯ ಕುರಿತು ಸ್ಪಷ್ಟನೆ ನೀಡಿದ ಅವರು, “ಈ ಹಿಂದೆ ಈ ವಿಧೇಯಕವನ್ನು 2034ರಿಂದ ಜಾರಿಗೆ ತರಲು ಉದ್ದೇಶಿಸಲಾಗಿತ್ತು. ಆದರೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಆಗ್ರಹದ ಮೇರೆಗೆ ಈಗ 2029ರಿಂದಲೇ ಜಾರಿಗೆ ತರಲು ಬಿಲ್ ಮಂಡಿಸಲಾಗಿದೆ. 2026ರಲ್ಲಿ ಜನಗಣತಿ ಪ್ರಕ್ರಿಯೆ ನಡೆಯಲಿದ್ದು, ಅದರ ಬೆನ್ನಲ್ಲೇ ಮೀಸಲಾತಿ ಜಾರಿಯಾಗಲಿದೆ,” ಎಂದರು.

ಕ್ಷೇತ್ರ ಹೆಚ್ಚಳದ ಲೆಕ್ಕಾಚಾರ:

ಕ್ಷೇತ್ರ ಮರುವಿಂಗಡಣೆಯು ಜನಸಂಖ್ಯೆ ಆಧಾರದ ಮೇಲೆ ಮಾತ್ರವಾಗುತ್ತಿದೆ ಎಂಬ ವಾದವನ್ನು ತಳ್ಳಿಹಾಕಿದ ಬೊಮ್ಮಾಯಿ, “ಪ್ರತಿ ರಾಜ್ಯದಲ್ಲಿ ಈಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯಲ್ಲಿ ಶೇ. 50ರಷ್ಟು ಹೆಚ್ಚಳವಾಗಲಿದೆ. ಉದಾಹರಣೆಗೆ ಕರ್ನಾಟಕದಲ್ಲಿ 2011ರ ಜನಗಣತಿಯ 5 ಕೋಟಿ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು, ಹೆಚ್ಚುವರಿ ಸ್ಥಾನಗಳನ್ನು (ಒಟ್ಟು 42 ಸ್ಥಾನಗಳಿಗೆ) ಸಮನಾಗಿ ಹಂಚಿಕೆ ಮಾಡಲಾಗುತ್ತದೆ. ಇದರಿಂದ ರಾಜ್ಯಗಳ ಪ್ರಾತಿನಿಧ್ಯದಲ್ಲಿ ವ್ಯತ್ಯಾಸವಾಗುವುದಿಲ್ಲ,” ಎಂದು ವಿವರಿಸಿದರು.

ಬದಲಾವಣೆ ನಿರಂತರ; ಜಾರಿ ವಿಳಂಬ ಸಲ್ಲದು:

“ಮಹಿಳಾ ಮೀಸಲಾತಿ ವಿಧೇಯಕ ಜಾರಿಗೆ ಕಳೆದ 30 ವರ್ಷಗಳಿಂದ ಪ್ರಯತ್ನ ನಡೆಯುತ್ತಲೇ ಇದೆ. ಅಂದು ಒಬಿಸಿ ಮೀಸಲಾತಿ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಇದನ್ನು ಮುಂದೂಡುತ್ತಾ ಬರಲಾಗಿತ್ತು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಲಿ, ಬದಲಾವಣೆಗಳು ನಿರಂತರವಾಗಿ ನಡೆಯುತ್ತವೆ ಎಂಬ ನಿಲುವು ತಳೆದಿದ್ದಾರೆ. ಮೀಸಲಾತಿ ನೆಪದಲ್ಲಿ ಮತ್ತೆ 30 ವರ್ಷ ವಿಳಂಬ ಮಾಡುವುದು ಸರಿಯಲ್ಲ ಎಂಬುದು ಕೇಂದ್ರದ ಸ್ಪಷ್ಟ ಅಭಿಪ್ರಾಯವಾಗಿದೆ,” ಎಂದು ಅವರು ಹೇಳಿದರು.

 


Share this with Friends

Related Post