Thu. Dec 26th, 2024

ದಾವಣಗೆರೆಯಲ್ಲಿ 120 ಕೋಟಿ ವೆಚ್ಚದಲ್ಲಿ ನಿರ್ಮಿತವಾದ ಸುಸಜ್ಜಿತ ಬಸ್ ನಿಲ್ದಾಣ ಲೋಕಾರ್ಪಣೆ

Share this with Friends

ದಾವಣಗೆರೆ, ಮಾ.10 : ವಾಣಿಜ್ಯ ನಗರಿ ದಾವಣಗೆರೆಗೆ ಅತ್ಯಂತ ಅವಶ್ಯಕವಾಗಿದ್ದ ಸುಸಜ್ಜಿತ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ.

ಈ ಬಸ್ ನಿಲ್ದಾಣವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣ ಮಾಡಿದ್ದು ವಿಶಾಲವಾಗಿದ್ದು ಅತ್ಯಂತ ಭವ್ಯವಾಗಿದೆ,ನಿಲ್ದಾಣದ ದ್ವಾರದಲ್ಲಿ‌ ಸುಸ್ವಾಗತ ಎಂದು ದೊಡ್ಡ ಅಕ್ಷರಗಳಲ್ಲಿ ಬರೆಯಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಲಾಗಿರುವ ಈ ಸುಸಜ್ಜಿತ ಬಸ್ ನಿಲ್ದಾಣದಲ್ಲಿ ವಿಭಾಗಿಯ ಕಚೇರಿ, ಶಾಪಿಂಗ್ ಮಾಲ್, ವಾಣಿಜ್ಯ ಮಳಿಗೆ ಸೇರಿದಂತೆ ಪ್ರಯಾಣಿಕರಿಗೆ ಬೇಕಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳೂ ಇವೆ.

ಸುಮಾರು 120 ಕೋಟಿ ರೂ ವೆಚ್ಚದಲ್ಲಿ 6.17 ಎಕರೆ ಜಾಗದಲ್ಲಿ ಈ ನೂತನ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ನಿನ್ನೆ ಲೋಕಾರ್ಪಣೆ ಮಾಡಿದ್ದಾರೆ.

ದಾವಣಗೆರೆಯ ಈ ನೂತನ ಬಸ್ ನಿಲ್ದಾಣ ನಮ್ಮ ಕರ್ನಾಟಕಕ್ಕೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು, ಅಷ್ಟು ಅದ್ಭುತವಾಗಿ ನಿರ್ಮಿತವಾಗಿದೆ.

ಪಾಸ್ ವಿತರಣೆಗೆ, ಬುಕಿಂಗ್ ಗೆ ಹೀಗೆ ಪ್ರತಿಯೊಂದಕ್ಕೂ ಬೇರೆ ಬೇರೆ ಕೌಂಟರ್ ಗಳಿದ್ದು ಜೊತೆಗೆ ವಿಭಾಗಿಯ ಕಚೇರಿ ಹೊಂದಿದ್ದು ಇದು ನಮ್ಮ ರಾಜ್ಯದ ಮೊದಲ ಮಾದರಿ ಬಸ್ ನಿಲ್ದಾಣ ವಾಗಿದೆ.

4 ಲಕ್ಷ ಲೀಟರ್ ಸಾಮರ್ಥ್ಯದ ವಾಟರ್ ಸ್ಟೋರೇಜ್,165 ಕೆ ಎಲ್ ಡಿ ಒಳಚರಂಡಿ ‌ಸಂಸ್ಕರಣಾ ಘಟಕವನ್ನೂ ಸ್ಥಾಪಿಸಲಾಗಿದೆ.
ಜತೆಗೆ ಮಕ್ಕಳಿಗೆ‌ ಆಟಕ್ಕೂ ವ್ಯವಸ್ಥೆ ಮಾಡಲಾಗಿದೆ. ಜಾಹೀರಾತು ಅಳವಡಿಕೆಗೂ ಅವಕಾಶವಿದೆ.

ಪ್ಲಾಟ್ ಫಾರಂ ಗಳಲ್ಲಿ ಬಸ್ ಗಾಗಿ ಕಾಯುವ ಪ್ರಯಾಣಿಕರು ಕುಳಿತುಕೊಳ್ಳಲು ಗ್ರಾನೈಟ್ ನಿಂದ ಮಾಡಿದ ಆಸನಗಳನ್ನು ಹಾಕಲಾಗಿದೆ ಅಲ್ಲದೆ ನೆಲ ಅಂತಸ್ತಿನಲ್ಲಿ 7700 ಸ್ಕ್ವೇರ್ ಮೀಟರ್ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಬಸ್ ನಿಲ್ದಾಣದ ಮೇಲಂತಸ್ತಿನಲ್ಲಿ 160 ಕಿಲೋ ವ್ಯಾಟ್ ಉತ್ಪಾದನಾ ಶಕ್ತಿಯುಳ್ಳ ಸೋಲಾರ್ ಗ್ರಿಡ್ ಮಾಡಿರುವುದು ವಿಶೇಷ.

ವಾಣಿಜ್ಯ ಮಳಿಗೆಯನ್ನು ಪ್ರತ್ಯೇಕವಾಗಿ ಮಾಡಲಾಗಿದ್ದು ಮಲ್ಟಿ ಪ್ಲೆಕ್ಸ್ ಸಿನಿಮಾ ಹಾಲುಗಳು ಇದೆ. ಸಾರ್ವಜನಿಕರು ಸುಖಾ ಸೀನರಾಗಿ ವೀಕ್ಷಿಸಲು ಆರಾಮದಾಯಕ ಚೇರ್ ಗಳು ಮತ್ತು ಅಲ್ಲಲ್ಲಿ ವಿಶ್ರಾಂತಿಗಾಗಿ ಕೊಠಡಿಗಳು ಇವೆ.

ಮೇಲಂತಸ್ತುಗಳಿಗೆ ಹೋಗಲು ಎಲಿವೇಟರ್ ಸಿಸ್ಟಮ್ ಕೂಡ ಇದೆ 340 ಆಸನಗಳುಳ್ಳ ಸಿನಿಮಾ ಹಾಲ್ ಇರುವುದು ವಿಶೇಷ ಈ ಬಸ್ ನಿಲ್ದಾಣದಿಂದ ಒಂದು ದಿನಕ್ಕೆ 1200 ಬಸ್ ಗಳು ಹೊರಡಲಿದೆ

ಹಸಿರೇ ಉಸಿರು ಎಂಬಂತೆ ಗಿಡ,ಮರ ಬೆಳೆಸಲೂ ಕ್ರಮ ಕೈಗೊಳ್ಳಲಾಗಿದೆ,
ಬಸ್ ಟಿಕೇಟ್, ಬಸ್ ಪಾಸ್ ವಿತರಣಾ ಕೊಠಡಿ, ಮಹಿಳಾ ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಹಾಗೂ ಮಗು ಪೋಷಣಾ ಕೊಠಡಿ, ಪುರುಷರ ಹಾಗೂ ಮಹಿಳೆಯರ ಶೌಚಾಲಯ, ಪುರುಷರ ಹಾಗೂ ಮಹಿಳೆಯರ ಅಂಗವಿಕಲರ ಶೌಚಾಲಯ, ಉಪಹಾರ ಗೃಹ, ಭದ್ರತಾ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ,104 ಕಾರು ಮತ್ತು 566 ದ್ವಿಚಕ್ರವಾಹನಗಳ ಪಾರ್ಕಿಂಗ್ ವ್ಯವಸ್ಥೆ, ನಿಲ್ದಾಣಾಧಿಕಾರಿ,ಸಂಚಾರ ನಿಯಂತ್ರಕರ ಮತ್ತು ವಿಚಾರಣಾ ಕೊಠಡಿಗಳನ್ನೂ ನಿರ್ಮಿಸಲಾಗಿದೆ.

ಒಟ್ಟಾರೆ ವಾಣಿಜ್ಯ ನಗರಿಯ ಈ ನೂತನ ಬಸ್ ನಿಲ್ದಾಣ ವಿನೂತನವಾಗಿಯೇ ಇದ್ದು,ಇದು ಬೆಣ್ಣೆ ನಗರಿಯ ಹೆಮ್ಮೆಯೂ ಹೌದು.

ಬಸ್ ನಿಲ್ದಾಣ ಲೋಕಾರ್ಪಣೆ ಸಮಾರಂಭದಲ್ಲಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಕೆ ಎಸ್ ಆರ್ ಟಿ ಸಿ ಅಧ್ಯಕ್ಷ ಎಸ್ ಆರ್ ಶ್ರೀನಿವಾಸ್, ಶಾಸಕರಾದ ಶಾಮನೂರು ಶಿವಶಂಕರಪ್ಪ, ಅಬ್ದುಲ್ ಜಬ್ಬಾರ್, ಬಸಂತಪ್ಪ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.


Share this with Friends

Related Post