ಮೈಸೂರು, ಮಾ.10: ಕೂಸಿನ ಮನೆಯಲ್ಲಿ ಮಕ್ಕಳಿಗೆ ಸಂಪೂರ್ಣ ಪೋಷಣೆ ಮಾಡಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ದೇಬೂರು ಗ್ರಾಮ ಪಂಚಾಯಿತಿಯ ಕೂಸಿನ ಮನೆಯನ್ನು ಸಾಂಕೇತಿಕವಾಗಿ ಉದ್ಘಾಟಿಸುವ ಮೂಲಕ ನಂಜನಗೂಡು ವಿಧಾನ ಸಭಾಕ್ಷೇತ್ರದಲ್ಲಿ ಸಿದ್ದವಿರುವ ಒಟ್ಟು 11 ಕೂಸಿನ ಮನೆಗಳಿಗೆ ಚಾಲನೆ ನೀಡಿ ಶಾಸಕರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೂತನ ಯೋಜನೆ ಕೂಸಿನ ಮನೆಯಲ್ಲಿ ಸಕಲ ವ್ಯವಸ್ಥೆ ಇರಲಿದೆ,
ನರೇಗಾ ಕಾಮಗಾರಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಪ್ರೊತ್ಸಾಹಿಸುವ ನಿಟ್ಟಿನಲ್ಲಿ ಕೂಸಿನ ಮನೆ ತೆರೆಯಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಕೂಲಿಕಾರರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಅವರ ಮಕ್ಕಳ ಸುರಕ್ಷತೆ ಮತ್ತು ಕಾಳಜಿಯನ್ನು ಕೂಸಿನ ಮನೆ ನಿರ್ವಹಿಸುತ್ತದೆ ಎಂದರು.
ಕೇಂದ್ರಕ್ಕೆ ಬರುವ ಮಕ್ಕಳಿಗೆ ದೈನಂದಿನ ವೇಳಾಪಟ್ಟಿಯಂತೆ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಕಲಿಕೆಗೆ ಪೂರಕವಾದ ಚಟುವಟಿಕೆಗೆಗಳಿಗೆ ಒತ್ತು ನೀಡಲಾಗುತ್ತದೆ. ಹಾಗಾಗಿ ತಾಯಂದಿರು ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ನೆಮ್ಮದಿಯಾಗಿ ಕೆಲಸಕ್ಕೆ ತೆರಳುವಂತೆ ಸಲಹೆ ನೀಡಿದರು.ಇದೇ ವೇಳೆ
ಕೂಸಿನ ಮನೆ ಮಕ್ಕಳಿಗೆ ಹಾಲು ಕುಡಿಸಿ ಶುಭ ಹಾರೈಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಶಿವಕುಮಾರ್ , ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಮತ್ತಿತರರು ಹಾಜರಿದ್ದರು.