ಬೆಂಗಳೂರು: ರಾಷ್ಟ್ರೀಯ ಜನಗಣತಿ-2027ರ ಕಾರ್ಯಕ್ಕೆ ನಿಯೋಜನೆಗೊಂಡು, ತರಬೇತಿ ಹಾಗೂ ಕರ್ತವ್ಯಕ್ಕೆ ಗೈರುಹಾಜರಾಗುತ್ತಿರುವ ಸಿಬ್ಬಂದಿಗಳಿಗೆ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರು ಬಿಸಿ ಮುಟ್ಟಿಸಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಮುಂದುವರಿದರೆ 3 ವರ್ಷ ಜೈಲು ಶಿಕ್ಷೆ ಹಾಗೂ ಕಾನೂನು ಕ್ರಮ ಜರುಗಿಸುವುದಾಗಿ ಅಂತಿಮ ಎಚ್ಚರಿಕೆ ನೀಡಿದ್ದಾರೆ.
ಕಾಯಿದೆಯಡಿ ಕಠಿಣ ಕ್ರಮ:
ಜನಗಣತಿ ಕಾರ್ಯವು ಕೇವಲ ಆಡಳಿತಾತ್ಮಕ ಕೆಲಸವಲ್ಲ, ಅದೊಂದು ರಾಷ್ಟ್ರೀಯ ಜವಾಬ್ದಾರಿ. ‘ಜನಗಣತಿ ಕಾಯಿದೆ 1948’ರ ಅನ್ವಯ, ಈ ಕೆಲಸಕ್ಕೆ ಗೈರಾಗುವ ಅಥವಾ ಅಸಹಕಾರ ನೀಡುವ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ 1,000 ರೂಪಾಯಿ ದಂಡದ ಜೊತೆಗೆ, ಗರಿಷ್ಠ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆಯನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಮೊಕದ್ದಮೆ ದಾಖಲಿಸಲು ಸಿದ್ಧತೆ ನಡೆಸಲಾಗಿದೆ.
ಸೇವೆಯಲ್ಲೂ ಕುತ್ತು:
ಕೇವಲ ಜೈಲು ಶಿಕ್ಷೆಯಲ್ಲದೆ, ಗೈರುಹಾಜರಾದ ಅವಧಿಯನ್ನು ‘ಡೈಸ್-ನಾನ್’ (Dies-Non) ಎಂದು ಪರಿಗಣಿಸಲಾಗುತ್ತದೆ. ಅಂದರೆ, ಆ ಅವಧಿಯ ವೇತನ ಕಡಿತವಾಗುವುದಲ್ಲದೆ, ಸೇವೆಯಲ್ಲಿನ ನಿರಂತರತೆಗೂ ಧಕ್ಕೆಯಾಗಲಿದೆ. ಇದು ಸಿಬ್ಬಂದಿಗಳ ಭವಿಷ್ಯದ ಬಡ್ತಿ ಹಾಗೂ ಸೇವಾ ಸೌಲಭ್ಯಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪ್ರಧಾನ ಜನಗಣತಿ ಅಧಿಕಾರಿ ಡಿ.ಎಸ್. ರಮೇಶ್ ಎಚ್ಚರಿಸಿದ್ದಾರೆ.
ಗೈರಾದವರ ಸಂಖ್ಯೆ: ಬೆಂಗಳೂರು ಪೂರ್ವ ವಲಯದಲ್ಲಿ 3,373 ಗಣತಿದಾರರು ಮತ್ತು 557 ಮೇಲ್ವಿಚಾರಕರಲ್ಲಿ ಹಲವರು ಗೈರಾಗಿದ್ದಾರೆ.
ತಕ್ಷಣದ ಸೂಚನೆ: ನೋಟಿಸ್ ಪಡೆದ ಸಿಬ್ಬಂದಿಗಳು ವಿಳಂಬ ಮಾಡದೆ ತಕ್ಷಣವೇ ತಮ್ಮ ನಿಯೋಜಿತ ವಾರ್ಡ್‌ಗಳಲ್ಲಿ ವರದಿ ಮಾಡಿಕೊಳ್ಳಬೇಕು.
ಇಲಾಖಾ ಕ್ರಮ: ಸೇವಾ ನಿಯಮಾವಳಿಗಳ ಅಡಿಯಲ್ಲಿ ಶಿಸ್ತು ಕ್ರಮ ಜರುಗಿಸಲು ಪಾಲಿಕೆ ನಿರ್ಧರಿಸಿದೆ.
“ರಾಷ್ಟ್ರೀಯ ಹಿತದೃಷ್ಟಿಯಿಂದ ನಡೆಯುವ ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು. ಕಾನೂನು ಕ್ರಮಕ್ಕೆ ಅವಕಾಶ ನೀಡದೆ ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕು” ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಏನಿದು ಡೈಸ್-ನಾನ್ (Dies-Non)?
ಯಾವುದೇ ಸರ್ಕಾರಿ ನೌಕರನು ಅಧಿಕೃತ ಅನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರಾದಾಗ, ಆ ದಿನವನ್ನು ‘ಕೆಲಸವಿಲ್ಲ-ವೇತನವಿಲ್ಲ’ ಎಂದು ಪರಿಗಣಿಸುವುದು. ಇದು ನೌಕರನ ಒಟ್ಟು ಸೇವಾ ಅವಧಿಯನ್ನು ಕಡಿಮೆ ಮಾಡುತ್ತದೆ ಮತ್ತು ನಿವೃತ್ತಿ ಸೌಲಭ್ಯಗಳ ಮೇಲೆಯೂ ಪರಿಣಾಮ ಬೀರುತ್ತದೆ.

