Fri. Jun 5th, 2026

“ಒನ್-ವೇ ಉಲ್ಲಂಘನೆ: ಬೆಂಗಳೂರಿನಲ್ಲಿ ಒಂದೇ ವಾರ 16,400ಕ್ಕೂ ಅಧಿಕ ಪ್ರಕರಣ ದಾಖಲು”

Share this with Friends

ಬೆಂಗಳೂರು: ನಗರದ ರಸ್ತೆಗಳಲ್ಲಿ ಸಂಚಾರ ಶಿಸ್ತು ಕಾಪಾಡಲು ಮತ್ತು ಅಪಘಾತಗಳನ್ನು ತಡೆಗಟ್ಟಲು ಬೆಂಗಳೂರು ಸಂಚಾರಿ ಪೊಲೀಸರು ಕೈಗೊಂಡಿರುವ ‘ವಿಶೇಷ ಕಾರ್ಯಾಚರಣೆ’ ಭರ್ಜರಿ ಫಲಿತಾಂಶ ನೀಡಿದೆ. ಮಾರ್ಚ್ 30 ರಿಂದ ಏಪ್ರಿಲ್ 19ರ ವರೆಗಿನ ವರದಿಯ ಪ್ರಕಾರ, ಏಕಮುಖ ಸಂಚಾರ (ಒನ್-ವೇ) ನಿಯಮ ಉಲ್ಲಂಘಿಸಿ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಬರೋಬ್ಬರಿ 16,409 ವಾಹನ ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶಾರ್ಟ್‌ಕಟ್ ಜೀವಕ್ಕೆ ಸಂಚಕಾರ:

ನಗರದ ಪ್ರಮುಖ ರಸ್ತೆಗಳಲ್ಲಿ ಸಮಯ ಉಳಿಸುವ ನೆಪದಲ್ಲಿ ಅಥವಾ ಅಡ್ಡದಾರಿ ಹಿಡಿಯುವ ಭರದಲ್ಲಿ ಅನೇಕ ಸವಾರರು ಒನ್-ವೇ ನಿಯಮವನ್ನು ಗಾಳಿಗೆ ತರುತ್ತಿದ್ದಾರೆ. ಇಂತಹ ಬೇಜವಾಬ್ದಾರಿ ತನದಿಂದ ಎದುರಿನಿಂದ ಬರುವ ವಾಹನಗಳಿಗೆ ಸಂಕಷ್ಟ ಎದುರಾಗುವುದಲ್ಲದೆ, ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಈಗ ನಗರದಾದ್ಯಂತ ಕಠಿಣ ನಿಗಾ ವಹಿಸಿದ್ದಾರೆ.

ಸುರಕ್ಷತೆಗೆ ಮೊದಲ ಆದ್ಯತೆ:

“ಪ್ರತಿಯೊಂದು ರಸ್ತೆಯನ್ನೂ ಸುರಕ್ಷಿತವಾಗಿಸುವುದು ನಮ್ಮ ಗುರಿ. ಸವಾರರು ವೇಗಕ್ಕಿಂತ ಸುರಕ್ಷತೆಗೆ ಆದ್ಯತೆ ನೀಡಬೇಕು” ಎಂದು ಸಂಚಾರಿ ಪೊಲೀಸ್ ಪ್ರಕಟಣೆ ತಿಳಿಸಿದೆ. ಕೇವಲ ದಂಡ ವಿಧಿಸುವುದು ಮಾತ್ರವಲ್ಲದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವೂ ಈ ಕಾರ್ಯಾಚರಣೆಯ ಭಾಗವಾಗಿದೆ.

ಸವಾರರ ಗಮನಕ್ಕೆ:

ಯಾವುದೇ ಕಾರಣಕ್ಕೂ ಏಕಮುಖ ಸಂಚಾರದ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸಬೇಡಿ.

ಸಂಚಾರಿ ಚಿಹ್ನೆಗಳನ್ನು ಸರಿಯಾಗಿ ಗಮನಿಸಿ ವಾಹನ ಚಲಾಯಿಸಿ.

ನಿಯಮ ಉಲ್ಲಂಘಿಸಿದರೆ ದಂಡದ ಜೊತೆಗೆ ಚಾಲನಾ ಪರವಾನಗಿ (DL) ರದ್ದಾಗುವ ಸಾಧ್ಯತೆಯೂ ಇರುತ್ತದೆ.

ಬೆಂಗಳೂರು ಪೊಲೀಸರ ಈ ವಿಶೇಷ ಕಾರ್ಯಾಚರಣೆಯು ಮುಂದಿನ ದಿನಗಳಲ್ಲೂ ಮುಂದುವರಿಯಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಕೋರಲಾಗಿದೆ.

 


Share this with Friends

Related Post