Thu. Dec 26th, 2024

ಲೋಕಸಭೆ ಚುನಾವಣೆ: ಮಂಡ್ಯ ನಾಯಕರ ಜತೆ ಹೆಚ್.ಡಿ.ಕೆ ಸಮಾಲೋಚನೆ

Share this with Friends

ಬೆಂಗಳೂರು,ಮಾ.10: ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯ ನಾಯಕರ ಜತೆ ಮಹತ್ವದ ಸಮಾಲೋಚನೆ ನಡೆಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಭೆಯ ನಂತರ ತಮ್ಮ ನಿವಾಸದಲ್ಲಿ ಮಂಡ್ಯ ನಾಯಕರ ಸಭೆ ನಡೆಸಿದ ಕುಮಾರಸ್ವಾಮಿ, ಜಿಲ್ಲೆಯ ಬಿಜೆಪಿ ನಾಯಕರು, ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡುವುದಾಗಿ ಮುಖಂಡರಿಗೆ ತಿಳಿಸಿದರು.

ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಹಾಗೂ ಮಾಜಿ ಶಾಸಕರಾದ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಡಾ.ಅನ್ನದಾನಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ರಮೇಶ್ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯ ಸ್ಥಿತಿಗತಿಗಳ‌ ಬಗ್ಗೆ ಚರ್ಚಿಸಿದ ಹೆಚ್.ಡಿ.ಕೆ ಬಿಜೆಪಿ ಮೈತ್ರಿ ನಂತರದ ಜಿಲ್ಲೆಯಲ್ಲಿನ ರಾಜಕೀಯ ಪರಿಸ್ಥಿತಿ ಬಗ್ಗೆಯೂ ಚರ್ಚಿಸಿದರು.

ಅಭ್ಯರ್ಥಿ ಆಯ್ಕೆ ಬಗ್ಗೆ ನಾಯಕರಿಂದ ಮಾಹಿತಿ ಸಂಗ್ರಹ ಮಾಡಿದರಲ್ಲದೆ ಚುನಾವಣೆಯಲ್ಲಿ ಗೆಲುವು ಮುಖ್ಯ. ಮೈತ್ರಿ ಅಭ್ಯರ್ಥಿಯನ್ನು ನಾವು ಗೆಲ್ಲಿಸಿಕೊಳ್ಳಲೇಬೇಕು. ಹಿಂದಿನ ಘಟನೆಗಳಿಂದ ಪಾಠ ಕಲಿಯಬೇಕು ಹಾಗೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ನಿಮ್ಮ ಪಾಡಿಗೆ ನೀವು ಕೆಲಸ ಮಾಡಿ, ನಾನು ಯಾರ ಹೆಸರನ್ನು ಘೋಷಣೆ ಮಾಡುತ್ತೇನೆಯೋ ಅವರ ಪರವಾಗಿ ಕೆಲಸ ಮಾಡಿ. ಯಾವ ಕಾರಣಕ್ಕೂ ಮೈತ್ರಿ ಧರ್ಮ ಮೀರುವುದು ಬೇಡ ಎಂದು ಸಲಹೆ ನೀಡಿದರು.

ಪಕ್ಷಕ್ಕೆ ಹಾಗೂ ಚುನಾವಣೆ ಗೆಲುವಿಗೆ ಹಾನಿ ಆಗುವಂತಹ ಯಾವುದೇ ಕೆಲಸವನ್ನು ಯಾರೂ ಮಾಡಬಾರದು. ಅಭ್ಯರ್ಥಿ ಯಾರು ಆಗುತ್ತಾರೆ ಎನ್ನುವುದು ಮುಖ್ಯವಲ್ಲ, ಗೆಲುವೇ ಮುಖ್ಯ ಎಂದು ನಾಯಕರಿಗೆ ಮನವರಿಕೆ ಮಾಡಿಕೊಟ್ಟರಲ್ಲದೆ ತಕ್ಷಣದಿಂದಲೇ ಚುನಾವಣೆ ಕೆಲಸದಲ್ಲಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದರು.


Share this with Friends

Related Post