Sat. Jun 6th, 2026

ತಮಿಳುನಾಡಿನಲ್ಲಿಯೂ ಕರ್ನಾಟಕ ಮಾದರಿ ಗ್ಯಾರಂಟಿ ಭರವಸೆ: ಡಿಕೆಶಿ ಅಬ್ಬರದ ಪ್ರಚಾರ

Share this with Friends

ಉತ್ತಂಗರೈ:ತಮಿಳುನಾಡಿನ ವಿಧಾನಸಭಾ ಚುನಾವಣಾ ಕಣ ಕಂಗೊಳಿಸುತ್ತಿದ್ದು, ಕರ್ನಾಟಕದ ಗ್ಯಾರಂಟಿ ಯೋಜನೆಗಳ ಗಾಳಿ ನೆರೆಯ ರಾಜ್ಯಕ್ಕೂ ಬೀಸಿದೆ. ಇಲ್ಲಿನ ಉತ್ತಂಗರೈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಪ್ಪುಸ್ವಾಮಿ ಪರವಾಗಿ ಮತಯಾಚಿಸಿದ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳೆಯರಿಗೆ ತಿಂಗಳಿಗೆ 2,000 ರೂಪಾಯಿ ನೀಡುವ ಭರವಸೆ ನೀಡುವ ಮೂಲಕ ಹೊಸ ಸಂಚಲನ ಮೂಡಿಸಿದರು.

ಮಹಿಳೆಯರಿಗೆ ಆರ್ಥಿಕ ಬಲ:

“ತಮಿಳುನಾಡಿನಲ್ಲಿ ಪ್ರಸ್ತುತ ಮಹಿಳೆಯರಿಗೆ ನೀಡಲಾಗುತ್ತಿರುವ 1,000 ರೂಪಾಯಿ ಆರ್ಥಿಕ ನೆರವನ್ನು ಚುನಾವಣೆ ಮುಗಿದ ನಂತರ ಕರ್ನಾಟಕದ ಮಾದರಿಯಲ್ಲೇ 2,000 ರೂಪಾಯಿಗೆ ಹೆಚ್ಚಿಸಲಾಗುವುದು” ಎಂದು ಅವರು ಘೋಷಿಸಿದರು. ಇದರಿಂದ ಸುಮಾರು 1.31 ಕೋಟಿ ಕುಟುಂಬಗಳ ಮಹಿಳೆಯರಿಗೆ ನೇರ ಪ್ರಯೋಜನವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರೈತರು ಮತ್ತು ಸಾಮಾನ್ಯರಿಗೆ ಉಡುಗೊರೆ:

ಕೇವಲ ಮಹಿಳೆಯರಿಗಷ್ಟೇ ಅಲ್ಲದೆ, ರೈತರ ಪಂಪ್‌ಸೆಟ್‌ಗಳಿಗೆ ಯಾವುದೇ ವಿದ್ಯುತ್ ಮೀಟರ್ ಇಲ್ಲದೆಯೇ ಉಚಿತ ವಿದ್ಯುತ್ ನೀಡುವುದಾಗಿ ಡಿಕೆಶಿ ಭರವಸೆ ನೀಡಿದರು. ಅಲ್ಲದೆ, ಅಗತ್ಯ ವಸ್ತುಗಳ ಖರೀದಿಗೆ ಕುಟುಂಬಗಳಿಗೆ 8,000 ರೂಪಾಯಿ ಸಹಾಯಧನ ಮತ್ತು ವೃದ್ಧಾಪ್ಯ ವೇತನ ಸೇರಿದಂತೆ ವಿವಿಧ ಪಿಂಚಣಿ ಹಣವನ್ನು ಹೆಚ್ಚಿಸುವ ಮಾತು ಕೊಟ್ಟರು.

ಬಿಜೆಪಿ ವಿರುದ್ಧ ವಾಗ್ದಾಳಿ:

ತಮ್ಮ ಭಾಷಣದುದ್ದಕ್ಕೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಅವರು, “ಬಿಜೆಪಿ ದಕ್ಷಿಣ ಭಾರತವನ್ನು ವಿಭಜಿಸುವ ಕುತಂತ್ರ ನಡೆಸುತ್ತಿದೆ. ಅಣ್ಣಾ ಡಿಎಂಕೆ ತನ್ನ ಅಸ್ತಿತ್ವ ಕಳೆದುಕೊಂಡು ಬಿಜೆಪಿಯೊಂದಿಗೆ ಕೈಜೋಡಿಸಿ ತಮಿಳುನಾಡಿನ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ” ಎಂದು ಟೀಕಿಸಿದರು. ಮುಂದಿನ ಬಾರಿಯೂ ಎಂ.ಕೆ. ಸ್ಟಾಲಿನ್ ಅವರೇ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಅವರು ಭವಿಷ್ಯ ನುಡಿದರು.

ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ:

ಕಾಂಗ್ರೆಸ್ ಇತಿಹಾಸವೇ ಈ ದೇಶದ ಇತಿಹಾಸವೆಂದ ಡಿಕೆಶಿ, ಕಾಮರಾಜ್ ಅವರ ಕಾಲದ ಉಚಿತ ಶಿಕ್ಷಣದಿಂದ ಹಿಡಿದು ಇಂದಿನ ಅನ್ನಭಾಗ್ಯದವರೆಗೆ ಕಾಂಗ್ರೆಸ್ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಶ್ರಮಿಸಿದೆ ಎಂದರು. “ನಮ್ಮ ಕೈ ಗುರುತು ಸಂವಿಧಾನ ಮತ್ತು ರಾಷ್ಟ್ರಧ್ವಜದ ಸಂಕೇತ. ನಾವೆಲ್ಲರೂ ಕೈ ಜೋಡಿಸಿ ದೇಶದ ಅಭಿವೃದ್ಧಿಗೆ ಶ್ರಮಿಸೋಣ” ಎಂದು ಕರೆ ನೀಡಿದರು.

“ತಮಿಳು ಸಂಸ್ಕೃತಿ, ತಮಿಳು ಭಾಷೆ, ಅಸ್ತಿತ್ವ, ಗೌರವ ಉಳಿಯಬೇಕು ಎಂದರೆ ಎಲ್ಲರೂ ಡಿಎಂಕೆ, ಕಾಂಗ್ರೆಸ್, ಕಮ್ಯುನಿಸ್ಟ್ ಹಾಗೂ ಇತರರನ್ನು ಒಳಗೊಂಡ ಮೈತ್ರಿಕೂಟಕ್ಕೆ ಮತ ನೀಡಬೇಕು. ಸ್ಟಾಲಿನ್‌ ಅವರ ಮುಂದಾಳತ್ವದಲ್ಲಿ 20 ಪಕ್ಷಗಳ ಮೈತ್ರಿ ಒಂದುಗೂಡಿ ಕೆಲಸ ಮಾಡುತ್ತಿವೆ. ನಾವು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ” ಎಂದು ಹೇಳಿದರು.


Share this with Friends

Related Post