Fri. Jun 5th, 2026

ಮಹಿಳೆ ಕಾನೂನು ರೂಪಿಸುವ ಅವಕಾಶ ಪಡೆಯಲಿ: ಶೋಭಾ ಕರಂದ್ಲಾಜೆ

Share this with Friends

ಬೆಂಗಳೂರು:  ರಾಜ್ಯದ ವಿಧಾನಸಭೆ ಮತ್ತು ದೇಶದ ಲೋಕಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಜಾಸ್ತಿ ಆಗಬೇಕು. ಮಹಿಳೆಯರು ಕಾನೂನು ರೂಪಿಸುವ ಜವಾಬ್ದಾರಿಯುತ ಅವಕಾಶ ಪಡೆಯಬೇಕು ಎಂದು ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿತ್ತು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದರು.

ಸಂಸತ್ತಿನಲ್ಲಿ ಇತ್ತೀಚೆಗೆ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗದಂತೆ ತಡೆದ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿ ಪಕ್ಷಗಳ ವಿರುದ್ಧ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ “ನಾರಿ ಶಕ್ತಿ ಫೋರಂ” ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

ದೇಶಕ್ಕೆ ಬೇಕಾದ ಕಾನೂನು ಲೋಕಸಭೆಯಲ್ಲಿ ಸಿದ್ಧವಾಗುತ್ತದೆ. ಯಾವ ನೀತಿ ಬೇಕು? ಹೇಗಿರಬೇಕು ಎಂಬ ನಿರ್ಣಾಯಕ ಪಾತ್ರದಲ್ಲಿ ಮಹಿಳೆಯರ ಪಾಲು ಇರಬೇಕು ಎಂಬ ಉದ್ದೇಶದಿಂದ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿತ್ತು. ಆದರೆ ಈ ಮಸೂದೆಗೆ ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳು ಬೆಂಬಲ ನೀಡದೆ ಸೋಲಾಗುವಂತೆ ಮಾಡಿದವು ಎಂದು ಆರೋಪಿಸಿದರು.

ಮಹಿಳೆಯ ಧ್ವನಿ ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಯಸಿದ್ದರು. ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳಾ ಎಂಎಲ್‍ಎಗಳ ಸಂಖ್ಯೆ ಹೆಚ್ಚಳವಾಗಬೇಕು ಎಂದುಕೊಂಡಿದ್ದರು ಎಂದರು.

ಪ್ರಧಾನಿ ಮೋದಿ ಅವರು ಮಹಿಳಾ ಸಂಸದರಿಗೆ ದೊಡ್ಡ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಈಗ ಹಣಕಾಸು ಸಚಿವೆ ಆಗಿದ್ದಾರೆ. ಈ ಹಿಂದೆ ರಕ್ಷಣಾ ಸಚಿವರಾಗಿದ್ದರು.  ಭಾರತ ಇಂದು ವಿಶ್ವದ ಆರ್ಥಿಕ ಶಕ್ತಿಗಳಲ್ಲಿ ನಾಲ್ಕನೇ ಶಕ್ತಿ ಆಗಿದೆ. ಇಂದು ಮಹಿಳೆ ಯುದ್ಧ ವಿಮಾನಗಳನ್ನು ಚಾಲನೆ ಮಾಡುತ್ತಾರೆ. ಸಿಂಧೂರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಮಹಿಳೆ. ಹೀಗೆ ಮಹಿಳೆಯ ಧ್ವನಿ ದೊಡ್ಡದಿದೆ. ಈ ಧ್ವನಿಗೆ ಶಿಕ್ಷಣ ಇದ್ದಾಗ ಬೆಲೆ ಬರುತ್ತೆ. ಹಣ ಇದ್ದಾಗ ಗೌರವ ಬರುತ್ತೆ. ಇದೆಲ್ಲಕ್ಕಿಂತ ನೀತಿ ರೂಪಿಸುವಲ್ಲಿ ಮಹಿಳೆ ಇದ್ದರೆ ಇನ್ನೂ ಒಳ್ಳೆಯದು ಎಂದರು.

ಮಹಿಳೆಯರು ಆರ್ಥಿಕವಾಗಿ ಸದೃಢವಾಗಲು ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಮಹಿಳೆ ಇಂದು ಡ್ರೋಣ್ ತಯಾರಿ ಸಹ ಮಾಡುತ್ತಿದ್ದಾರೆ ಎಂದು ವಿವರಿಸಿದರು. ಹೊಸದಾಗಿ ಮಹಿಳಾ ಮೀಸಲು ಕಾಯಿದೆ ಯಾಕೆ ತಂದಿದ್ದೀರ ಎಂದು ಕಾಂಗ್ರೆಸ್ ನವರು ಕೇಳಬಹುದು. ಈ ಹಿಂದೆ 543 ಸ್ಥಾನಗಳಿಗೆ ಮಹಿಳಾ ಮೀಸಲಾತಿ ಮಸೂದೆ ತಂದಿದ್ದರು.

ಪುರುಷರ ಸ್ಥಾನಗಳನ್ನು ಕಿತ್ತು ಕೊಳ್ಳುವುದು ಬೇಡ ಎಂದು ಸ್ಥಾನಗಳನ್ನು ಹೆಚ್ಚಳ ಮಾಡಿ ಮಸೂದೆ ಮಂಡಿಸಿದರು. ಗಣತಿ ಆದ ನಂತರ ಕ್ಷೇತ್ರ ಮರುವಿಂಗಡಣೆ ಮಾಡಿ ಎಂದು ಕಾಂಗ್ರೆಸ್ ನವರು ಒತ್ತಾಯ ಮಾಡುತ್ತಿದ್ದಾರೆ. ಸಮೀಕ್ಷೆ ಆದ ನಂತರ ಕ್ಷೇತ್ರ ಹಂಚಿಕೆ ಮಾಡಿದರೆ ದಕ್ಷಿಣ ಭಾರತಕ್ಕೆ ಸೀಟು ಕಡಿಮೆ ಆಗಲಿದೆ. ಹಾಗಾಗಿ ಎರಡೂ ಮಸೂದೆಯನ್ನು ಮಂಡಿಸಲಾಗಿತ್ತು. ಪ್ರತಿ ರಾಜ್ಯಕ್ಕೆ ಶೇ 50 ರಷ್ಟು ಲೋಕಸಭಾ ಸ್ಥಾನಗಳನ್ನು ಹೆಚ್ಚಳ ಮಾಡಲು ಮಸೂದೆ ಉದ್ದೇಶಿಸಿತ್ತು ಎಂದರು.

ದೊಡ್ಡ ಪ್ರಮಾಣದ ಹೋರಾಟ ಅಗತ್ಯ- ಮಂಜುಳಾ

ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷರು ಮತ್ತು ವಕೀಲರಾದ ಸಿ ಮಂಜುಳ ಅವರು ಮಾತನಾಡಿ, ನಾರೀ ಶಕ್ತಿ ಇಂದು ಪ್ರಬಲವಾಗಿ ಬೆಳೆದಿದೆ. ನಾರಿಶಕ್ತಿ ಗುಡುಗಿದರೆ ಸೋನಿಯಾಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನಡುಗುವ ಹಾಗೆ ಆಗಬೇಕು. ಆ ಮಟ್ಟಿನ ಹೋರಾಟ ಮಾಡಬೇಕು ಎಂದರು.

ಸಿಲಿಕಾನ್ ಸಿಟಿಯ ಮಹಿಳೆಯರು ಕೇವಲ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಲ್ಲ. ಅನ್ಯಾಯದ ವಿರುದ್ಧ ಸಿಡಿದೇಳುವ ಜ್ವಾಲಾಮುಖಿಗಳು. ಭಾರತದ ಮಹಿಳೆ ಕೇವಲ ಹೂವಲ್ಲ. ಅವಳು ಜ್ವಾಲೆ ಎಂದರು. ನಾರೀ ಶಕ್ತಿ ರಾಷ್ಟ್ರಶಕ್ತಿಯಾಗಬೇಕು ಎಂದು ಹೇಳಿದರು.

ಮಹಿಳಾ ಮೀಸಲು ಮಸೂದೆ ಸೋಲಿಸಿದ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ವಿರುದ್ಧ ಜನಾಕ್ರೋಶ ಮಹಿಳಾ ಸಭೆ ಮಾಡಲಾಗುತ್ತಿದೆ. ಇದು ಇಡೀ ನಾರಿಶಕ್ತಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ದೂರಿದರು. ಮಹಿಳೆಯರು ಮಹಿಳಾ ಮೀಸಲು ಪರವಾಗಿ ಧ್ವನಿಗೂಡಿಸಿದರೆ ಕಿವುಡ ಕಾಂಗ್ರೆಸ್‍ಗೆ ಕೇಳುತ್ತೆ. ಲಜ್ಜೆಗೆಟ್ಟ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‍ಗೆ ಬುದ್ಧಿಕಲಿಸಬೇಕಾಗಿದೆ. ಕಾಂಗ್ರೆಸ್ ಧೋರಣೆ ಖಂಡಿಸಿ ಇನ್ನು ಮುಂದೆ ಹೋರಾಟಕ್ಕೆ ಸದಾ ಸಿದ್ಧರಾಗೋಣ ಎಂದು ಕರೆ ನೀಡಿದರು.

ಸುಮಂಗಲಿ ಸೇವಾ ಆಶ್ರಮದ ಸ್ಥಾಪಕರು ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್.ಜಿ. ಸುಶೀಲಮ್ಮ ಅವರು ಮಾತನಾಡಿ, ಮಹಿಳೆಯರ ಸಂಖ್ಯೆ ಜಾಸ್ತಿ ಆಗಿದೆ. ಅವರು ಇಂದು ಹೆಚ್ಚು ಹೆಚ್ಚು ಓದಿದ್ದಾರೆ. ತಿಳಿವಳಿಕೆ ಇದೆ. ಆದ್ದರಿಂದ ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಸ್ಥಾನಗಳನ್ನು ಪಡೆಯಲು ಮಸೂದೆ ಮಂಡಿಸಲಾಗಿತ್ತು. ಆದರೆ ಅದಕ್ಕೆ ಕಾಂಗ್ರೆಸ್ ಬೆಂಬಲ ನೀಡಲಿಲ್ಲ. ನಾವೆಲ್ಲ ಸೇರಿ ಒಂದಾಗಿ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡೋಣ ಎಂದು ಕರೆ ನೀಡಿದರು.

 


Share this with Friends

Related Post