ಬೆಂಗಳೂರು: ಕೆಎಸ್ಎಸ್ಐಡಿಸಿ ಮತ್ತು ಬೆಂಗಳೂರು ಜಲಮಂಡಲಿಯಲ್ಲಿ ಖಾಲಿ ಇರುವ ಸಹಾಯಕ ಎಂಜಿನಿಯರ್, ವ್ಯವಸ್ಥಾಪಕರು ಮತ್ತು ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಏ.26 ಮತ್ತು 27ರಂದು ಲಿಖಿತ ಪರೀಕ್ಷೆ ನಡೆಯಲಿದ್ದು, ಇದಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಗಿ ಕ್ರಮಗಳನ್ನು ಮಾಡಿಕೊಂಡಿದೆ.
ಉಳಿಕ ಮೂಲ ವೃಂದದ ಅಭ್ಯರ್ಥಿಗಳಿಗೆ ಏ.26ರಂದು ಬೆಂಗಳೂರಿನ 11 ಮತ್ತು ಕಲ್ಬುರ್ಗಿಯ ಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಏ.27ರಂದು ಕಲ್ಬುರ್ಗಿಯ ಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ವೆಬ್ ಕಾಸ್ಟಿಂಗ್ ಮೂಲಕ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿನ ಚಲನವಲನಗಳನ್ನು ಬೆಂಗಳೂರಿನ ಕೆಇಎ ಕಚೇರಿಯಲ್ಲಿ ಸ್ಥಾಪಿಸಿರುವ ಕಮಾಂಡ್ ಸೆಂಟರ್ ನಿಂದಲೇ ನಿಗಾ ವಹಿಸಲಾಗುವುದು. ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗುವುದು ಎಂದು ಅವರು ವಿವರಿಸಿದರು.
ಸಿಇಟಿ ಅರ್ಜಿ ಎಡಿಟಿಂಗ್ ಗೆ ಮತ್ತೊಮ್ಮೆ ಅವಕಾಶ:
ಸಾಮಾನ್ಯ ಪ್ರವೇಶ ಪರೀಕ್ಷೆ ಸಲುವಾಗಿ ಅರ್ಜಿ ಸಲ್ಲಿಸಿರುವ ಹಲವರು ಅರ್ಜಿಯಲ್ಲಿನ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳಲು ಮನವಿ ಮಾಡಿಕೊಂಡಿದ್ದು, ಆ ಪ್ರಕಾರ ಅಂತಹವರಿಗೆ ಅನುಕೂಲ ಮಾಡಲು ಮೇ 3ರವರೆಗೆ ಎಡಿಟಿಂಗ್ ಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ವ್ಯಾಸಂಗದ ವಿವರ, ಮೀಸಲಾತಿ, ಇತರ ಕ್ಲೇಮ್ಸ್ ದಾಖಲಿಸಿಕೊಳ್ಳಬೇಕಿದ್ದರೂ ಅದಕ್ಕೆ ಅವಕಾಶ ನೀಡಲಾಗಿದೆ. ಇದೇ ಕೊನೆ ಅವಕಾಶವಾಗಿದ್ದು, ಮತ್ತೊಮ್ಮೆ ಎಡಿಟಿಂಗ್ ಗೆ ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

