ಬೆಂಗಳೂರು: ಮುಂಬರುವ ಮುಂಗಾರು ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರವಾಹ ಹಾಗೂ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಪಶ್ಚಿಮ ಬೆಂಗಳೂರು ನಗರ ಪಾಲಿಕೆ ವತಿಯಿಂದ ಇಂದು ಬೃಹತ್ ಸನ್ನದ್ಧತಾ ಪರಿಶೀಲನೆ ನಡೆಸಲಾಯಿತು.
ಗೋವಿಂದರಾಜನಗರದ ಬಿಜಿಎಸ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಪರಿಶೀಲನಾ ಪರೇಡ್‌ನಲ್ಲಿ ಪಶ್ಚಿಮ ವಲಯದ ಕಮಿಷನರ್ ಡಾ. ರಾಜೇಂದ್ರ ಕೆ.ವಿ. ಅವರು ಪಾಲ್ಗೊಂಡು ಎಲ್ಲಾ ವಿಭಾಗಗಳ ಸಿಬ್ಬಂದಿ ಮತ್ತು ಸಲಕರಣೆಗಳ ಸ್ಥಿತಿಗತಿಯನ್ನು ವೀಕ್ಷಿಸಿದರು.
ಮಳೆಗಾಲದ ಅವಧಿಯಲ್ಲಿ ನಿಯಂತ್ರಣ ಕೊಠಡಿಗಳು ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಕ್ಷೇತ್ರ ಸಿಬ್ಬಂದಿ ಹೇಗೆ ಸ್ಪಂದಿಸಬೇಕು ಎಂಬ ಕುರಿತು ಅಧಿಕಾರಿಗಳು ಕಮಿಷನರ್ ಅವರಿಗೆ ವಿವರಣೆ ನೀಡಿದರು. ಇದೇ ವೇಳೆ ಮಳೆ ಮತ್ತು ಗಾಳಿಗೆ ಧರೆಗುರುಳುವ ಮರಗಳನ್ನು ತೆರವುಗೊಳಿಸಲು ಬಳಸುವ ಆಧುನಿಕ ಕಟಿಂಗ್ ಯಂತ್ರಗಳು, ತಗ್ಗು ಪ್ರದೇಶಗಳಲ್ಲಿ ನಿಲ್ಲುವ ನೀರನ್ನು ಹೊರಹಾಕುವ ಡಿವಾಟರಿಂಗ್ ಪಂಪ್‌ಗಳು, ಹೂಳು ಎತ್ತುವ ಯಂತ್ರಗಳು ಹಾಗೂ ಟ್ರ್ಯಾಕ್ಟರ್‌ಗಳು ಸೇರಿದಂತೆ ಎಲ್ಲಾ ತುರ್ತು ರಕ್ಷಣಾ ವಾಹನಗಳ ಕಾರ್ಯಾಚರಣಾ ಕ್ಷಮತೆಯನ್ನು ಪ್ರಾಯೋಗಿಕವಾಗಿ ಪರಿಶೀಲಿಸಲಾಯಿತು.
ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳೊಂದಿಗೆ ಸಂವಾದ ನಡೆಸಿದ ಕಮಿಷನರ್ ಡಾ. ರಾಜೇಂದ್ರ ಕೆ.ವಿ., “ಮಳೆಯಿಂದಾಗಿ ನಗರದಲ್ಲಿ ಯಾವುದೇ ಸಾರ್ವಜನಿಕರಿಗೆ ತೊಂದರೆಯಾಗಬಾರದು. ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಮೊದಲ ಆದ್ಯತೆಯಾಗಬೇಕು” ಎಂದು ಸ್ಪಷ್ಟಪಡಿಸಿದರು.
ಸಮನ್ವಯತೆಗೆ ಸೂಚನೆ:
ವಿಪತ್ತು ನಿರ್ವಹಣೆಯನ್ನು ಯಶಸ್ವಿಗೊಳಿಸಲು ಸಿವಿಲ್ ಡಿಫೆನ್ಸ್ ತಂಡಗಳನ್ನು ಸಕ್ರಿಯವಾಗಿ ಬಳಸಿಕೊಳ್ಳಬೇಕು ಮತ್ತು ನಾಗರಿಕರ ಸಹಭಾಗಿತ್ವವನ್ನು ಹೆಚ್ಚಿಸಬೇಕು. ಪಾಲಿಕೆಯ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು ಹಾಗೂ ಕರಳು ಸವಕಳಿ ಅಥವಾ ತುರ್ತು ಕರೆಗಳು ಬಂದ ತಕ್ಷಣವೇ ಸ್ಪಂದಿಸಲು ಸಿಬ್ಬಂದಿ 24 ಗಂಟೆಯೂ ಸನ್ನದ್ಧರಾಗಿರಬೇಕು ಎಂದು ಅವರು ಆದೇಶಿಸಿದರು.

