Tue. Dec 24th, 2024

ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟಿನ್ ಸಹಕಾರಿ-ಸಚಿವ ಮಹದೇವಪ್ಪ

Share this with Friends

ಮೈಸೂರು ಮಾ.11: ಇಂದಿರಾ ಕ್ಯಾಂಟಿನ್ ಗಳು ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳ ಹಸಿವನ್ನು ನೀಗಿಸುವ ಕಾರ್ಯ ನಿರ್ವಹಿಸುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಇಂದಿರಾ ಕ್ಯಾಂಟಿನ್ ಶಂಕು ಸ್ಥಾಪನೆ ಹಾಗೂ ಮುಖ್ಯಮಂತ್ರಿಗಳ ನಗರೋತ್ಥಾನ 4 ರಡಿ ಆಯ್ದ ವೈಯಕ್ತಿಕ ಪಾಲನುಭವಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊಸದಾಗಿ 9 ಇಂದಿರಾ ಕ್ಯಾಂಟಿನ್ ಗಳಿಗೆ ಇಂದು ಶಂಕು ಸ್ಥಾಪನೆ ನೆರವೇರಿಸಲಾಗಿದೆ, 2016 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟಿನ್ ಗಳನ್ನೂ ಹೊಸದಾಗಿ ಪ್ರಾರಂಭಿಸಲಾಯಿತು ಎಂದು ಹೇಳಿದರು.

5 ರೂ ಗೆ ತಿಂಡಿ 10 ರು ಗೆ ಊಟ ನೀಡಲು ಆರಂಭಿಸಲಾಯಿತು,ರಾಜ್ಯದಲ್ಲಿ 520 ಇಂದಿರಾ ಕ್ಯಾಂಟಿನ್ ಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಕಡಿಮೆ ದರದಲ್ಲಿ ಉತ್ತಮ ತಿಂಡಿ ಊಟ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ 17 ಇಂದಿರಾ ಕ್ಯಾಂಟಿನ್ ಗಳು ಕೆಲಸ ಮಾಡುತ್ತಿದ್ದು ಇದರಲ್ಲಿ 12 ಮೈಸೂರು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿವೆ,
ಇಂದಿರಾ ಕ್ಯಾಂಟಿನ್ ಗಳಲ್ಲಿ ಹೊಸದಾಗಿ ರಾಗಿ ಮುದ್ದೆ, ಸೊಪ್ಪಿನ ಸಾರು ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ ಇಂದು ನಗರದಲ್ಲಿ 9 ಇಂದಿರಾ ಕ್ಯಾಂಟಿನ್ ಗಳ ಶಂಕು ಸ್ಥಾಪನೆ ನೆರವೇರಿಸಲಾಗಿದೆ, ಊಟದ ಮೆನುವನ್ನು ಬದಲಾಯಿಸಿಕೊಂಡು ಮುದ್ದೆ ಮತ್ತು ಸೊಪ್ಪು ಸಾಂಬಾರ್ ನೀಡಲು ಟೆಂಡರ್ ನಲ್ಲಿ ಸೇರಿಸಲಾಗಿದೆ ಎಂದು ಹೇಳಿದರು.

ಶಾಸಕರಾದ ತನ್ವೀರ್ ಸೇಠ್ ಅವರು ಮಾತನಾಡಿ ಸರ್ಕಾರ ಜನಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಕೆ ಹರೀಶ್ ಗೌಡ,ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಡಿ ತಿಮ್ಮಯ್ಯ, ಮುಡ ಅಧ್ಯಕ್ಷ ಕೆ ಮರಿಗೌಡ,ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್ ಮತ್ತಿತರರು ಹಾಜರಿದ್ದರು.


Share this with Friends

Related Post