ಬೆಂಗಳೂರು: ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಮಿತವ್ಯಯದ ಸಲಹೆಯನ್ನು ಇಡೀ ದೇಶವೇ ಮುಕ್ತವಾಗಿ ಒಪ್ಪಿಕೊಂಡಿದೆ. ಆದರೆ ಇದನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಜವಾಬ್ದಾರಿಯ ಅರಿವಿಲ್ಲದಿರುವುದು ಅತ್ಯಂತ ದುರದೃಷ್ಟಕರ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಕಳಕಳಿಯನ್ನು ಜನರಿಗೆ ತಲುಪಿಸಬೇಕಾದ ವಿಪಕ್ಷಗಳು, ರಾಜಕೀಯ ಲಾಭಕ್ಕಾಗಿ ಅಪಪ್ರಚಾರದಲ್ಲಿ ತೊಡಗಿವೆ ಎಂದು ಕಿಡಿಕಾರಿದರು.
ಆರ್ಥಿಕ ಭದ್ರತೆಗೆ ಪ್ರಧಾನಿ ಕರೆ ಸರಿ ಇದೆ:
ಜಾಗತಿಕವಾಗಿ ಮಧ್ಯಪ್ರಾಚ್ಯ ಬಿಕ್ಕಟ್ಟು ತಲೆದೂರಿರುವುದರಿಂದ ಜಗತ್ತಿನ ಎಲ್ಲಾ ದೇಶಗಳ ಆರ್ಥಿಕತೆ ಏರುಪೇರಾಗಿದೆ. ಭಾರತವು ತೈಲ ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವುದರಿಂದ ನಮ್ಮ ಮೇಲೂ ಇದರ ಪ್ರಭಾವ ಬೀರಲಿದೆ. ಇಂತಹ ಸವಾಲುಗಳನ್ನು ಭಾರತ ಸಮರ್ಥವಾಗಿ ಎದುರಿಸುತ್ತಿದ್ದರೂ, ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವರ್ಷ ಚಿನ್ನದ ಖರೀದಿ ಕಡಿಮೆ ಮಾಡಿ, ಮಿತವ್ಯಯ ಪಾಲಿಸುವಂತೆ ಪ್ರಧಾನಿ ಮನವಿ ಮಾಡಿದ್ದಾರೆ. ಭವಿಷ್ಯದಲ್ಲಿ ದೇಶವು ಯಾವುದೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಬಾರದು ಎಂಬ ದೂರದೃಷ್ಟಿ ಇದರಲ್ಲಿದೆ ಎಂದು ಕುಮಾರಸ್ವಾಮಿ ಸಮರ್ಥಿಸಿಕೊಂಡರು.
ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಏನು ಮಾಡುತ್ತಿತ್ತು?
ದೇಶದ ಪ್ರಜೆಗಳು ಪ್ರಧಾನಿಯವರ ಹಿತವಚನವನ್ನು ಒಪ್ಪಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಇದರಲ್ಲಿ ತಪ್ಪು ಹುಡುಕುತ್ತಾ ಸಣ್ಣತನ ಪ್ರದರ್ಶಿಸುತ್ತಿದೆ. ಒಂದು ವೇಳೆ ಇಂತಹ ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಏನು ಮಾಡುತ್ತಿತ್ತು? ಸುಖಾಸುಮ್ಮನೆ ಟೀಕೆ ಮಾಡುವುದನ್ನು ಬಿಟ್ಟು ಕಾಂಗ್ರೆಸ್ ನಾಯಕರು ಜವಾಬ್ದಾರಿಯಿಂದ ವರ್ತಿಸಲಿ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ಗ್ಯಾರಂಟಿ ಹೆಸರಲ್ಲಿ ಲೂಟಿ, ಜನರ ಮೇಲೆ ತೆರಿಗೆ ಬರೆ:
ಕೇಂದ್ರ ಸರ್ಕಾರವನ್ನು ಟೀಕಿಸುವ ಮುನ್ನ ಕಾಂಗ್ರೆಸ್ ನಾಯಕರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಜನರ ಮೇಲೆ ನಿರಂತರವಾಗಿ ಬೆಲೆ ಏರಿಕೆ ಮತ್ತು ತೆರಿಗೆ ಬರೆ ಎಳೆಯಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡುವುದನ್ನು ಬಿಟ್ಟು ಸಣ್ಣಬುದ್ಧಿ ಪ್ರದರ್ಶಿಸುತ್ತಿದ್ದಾರೆ. ಇಂತಹ ವರ್ತನೆ ಬಿಟ್ಟು ದೇಶದ ಹಿತದೃಷ್ಟಿಯಿಂದ ಹೃದಯ ವೈಶಾಲ್ಯತೆ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.
ಸಾಧನಾ ಸಮಾವೇಶ ಅಲ್ಲ, ಕಾಂಗ್ರೆಸ್ ನಿರ್ನಾಮದ ಸಮಾವೇಶ!
ತುಮಕೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಸಾಧನಾ ಸಮಾವೇಶವನ್ನು ತರಾಟೆಗೆ ತೆಗೆದುಕೊಂಡ ಸಚಿವರು, “ಇದು ಯಾವ ಪುರುಷಾರ್ಥಕ್ಕಾಗಿ ಮಾಡುತ್ತಿರುವ ಸಮಾವೇಶ? ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಕುರ್ಚಿ ಕಾಳಗದ ಯಶಸ್ಸಿಗಾಗಿ ಈ ಸಮಾವೇಶ ಮಾಡುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬರೋಬ್ಬರಿ 713 ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಪೊಲೀಸರನ್ನು ಸಸ್ಪೆಂಡ್ ಮಾಡಲು ಕಾರಣವೇನು ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. ರಾಜ್ಯದಲ್ಲಿ ಯಾವುದೇ ಸಾಧನೆ ಮಾಡದ ಕಾಂಗ್ರೆಸ್, ಮುಂಬರುವ ದಿನಗಳಲ್ಲಿ ತನ್ನ ಅಸ್ತಿತ್ವವನ್ನು ತಾನೇ ಸಂಪೂರ್ಣವಾಗಿ ನಿರ್ನಾಮ ಮಾಡಿಕೊಳ್ಳಲು ಈ ಸಮಾವೇಶ ಆಯೋಜಿಸಿದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

