Sat. Jun 6th, 2026

ದುಬಾರೆಯಲ್ಲಿ ಮತ್ತೊಂದು ಆಘಾತ: ಕಂಜನ್ ಆನೆಯ ಭೀಕರ ದಾಳಿಗೆ ತುತ್ತಾಗಿದ್ದ ‘ಮಾರ್ತಾಂಡ’ ಆನೆ ಕೊನೆಯುಸಿರು!

Share this with Friends

ಮಡಿಕೇರಿ: ಕೊಡಗಿನ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಸರಣಿ ದುರಂತಗಳು ಮುಂದುವರಿದಿದ್ದು, ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಪ್ರೇಮಿಗಳು ಕಣ್ಣೀರಿನಲ್ಲಿ ಮುಳುಗಿದ್ದಾರೆ. ಕಾವೇರಿ ನದಿ ತೀರದಲ್ಲಿ ನಡೆದಿದ್ದ ಭೀಕರ ಕಾಳಗದ ವೇಳೆ ‘ಕಂಜನ್’ ಆನೆಯ ದಂತದ ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರಸಿದ್ಧ ಸಾಕಾನೆ ‘ಮಾರ್ತಾಂಡ’ ಇಂದು (ಮೇ 19) ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.

ಆಳವಾದ ಗಾಯ, ತೀವ್ರ ರಕ್ತಸ್ರಾವ!

ಸೋಮವಾರ ಆನೆಗಳಿಗೆ ಸ್ನಾನ ಮಾಡಿಸುವ ಸಂದರ್ಭದಲ್ಲಿ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಅನಿರೀಕ್ಷಿತವಾಗಿ ಜಗಳ ಆರಂಭವಾಗಿತ್ತು. ಈ ವೇಳೆ ರೊಚ್ಚಿಗೆದ್ದ ಕಂಜನ್ ಆನೆಯು ತನ್ನ ದಂತಗಳಿಂದ ಮಾರ್ತಾಂಡನ ಹೊಟ್ಟೆ ಹಾಗೂ ಕಿವಿಯ ಹಿಂಭಾಗಕ್ಕೆ ಬಲವಾಗಿ ಚುಚ್ಚಿತ್ತು. ದಂತಗಳು ಆಳವಾಗಿ ಇಳಿದಿದ್ದರಿಂದ ಮಾರ್ತಾಂಡನ ದೇಹದಲ್ಲಿ ತೀವ್ರ ಆಂತರಿಕ ಗಾಯಗಳಾಗಿದ್ದವು ಮತ್ತು ಭಾರಿ ಪ್ರಮಾಣದಲ್ಲಿ ರಕ್ತಸ್ರಾವವಾಗಿತ್ತು.

ಪಶುವೈದ್ಯರ ಸತತ ಪ್ರಯತ್ನ ವಿಫಲ

ಘಟನೆ ನಡೆದ ತಕ್ಷಣವೇ ಎಚ್ಚೆತ್ತ ಅರಣ್ಯ ಇಲಾಖೆಯು ತಜ್ಞ ಪಶುವೈದ್ಯರ ತಂಡವನ್ನು ಸ್ಥಳಕ್ಕೆ ಕರೆಸಿ ಇಡೀ ರಾತ್ರಿ ತುರ್ತು ಚಿಕಿತ್ಸೆ ಕೊಡಿಸಿತ್ತು. ಆದರೆ, ಗಾಯದ ತೀವ್ರತೆ ಹೆಚ್ಚಾಗಿದ್ದರಿಂದ ಚಿಕಿತ್ಸೆ ಸ್ಪಂದಿಸದೆ ಮಾರ್ತಾಂಡ ಇಂದು ಮುಂಜಾನೆ ಪ್ರಾಣ ಬಿಟ್ಟಿದ್ದಾನೆ. ಅತ್ಯಂತ ಶಾಂತ ಸ್ವಭಾವದ ಮಾರ್ತಾಂಡ ಆನೆಯು ಇಲಾಖೆಯ ಹಲವು ಕಠಿಣ ಕಾಡಾನೆ ಸೆರೆ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ನಿನ್ನೆ ಪ್ರವಾಸಿ ಮಹಿಳೆಯೊಬ್ಬರು ಇದೇ ಆನೆಗಳ ಕಾಳಗದ ಮಧ್ಯೆ ಸಿಲುಕಿ ಮೃತಪಟ್ಟ ಬೆನ್ನಲ್ಲೇ, ಇಂದು ಇಲಾಖೆಯ ಅತ್ಯಂತ ದೈತ್ಯ ಹಾಗೂ ಶಕ್ತಿಶಾಲಿ ಸಾಕಾನೆಯೂ ಸಾವನ್ನಪ್ಪಿರುವುದು ದುಬಾರೆ ಶಿಬಿರಕ್ಕೆ ಭರಿಸಲಾಗದ ನಷ್ಟ ಉಂಟುಮಾಡಿದೆ.

 


Share this with Friends

Related Post