Fri. Jun 5th, 2026

ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ: ಸೂರ್ಯನಗರದ ಸಮಗ್ರ ಅಭಿವೃದ್ಧಿಗೆ ನಾಂದಿ!

Share this with Friends

ಬೆಂಗಳೂರು: “ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡುವ ಮೂಲಕ ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿ ಸೇರಿದಂತೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಮುನ್ನೆಚ್ಚರಿಕೆ ಹೆಜ್ಜೆ ಇಟ್ಟಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದ್ದಾರೆ.

ವಸತಿ ಇಲಾಖೆ ಹಾಗೂ ಕರ್ನಾಟಕ ಗೃಹ ಮಂಡಳಿ (KHB) ಜಂಟಿಯಾಗಿ ಸೂರ್ಯಗ್ರಾಮದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ರೀಡಾಂಗಣದ ಶಂಕುಸ್ಥಾಪನೆ, ಸಿಎಂ ಅವರ “ನಮ್ಮ ಮನೆ” ಯೋಜನೆಗೆ ಚಾಲನೆ ಹಾಗೂ ‘ಸೂರ್ಯಶೈನ್’, ‘ಸೂರ್ಯ ಡಿವೈನ್’ ವಸತಿ ಸಮುಚ್ಚಯ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೇಶದ ಎರಡನೇ ಬೃಹತ್ ಸ್ಟೇಡಿಯಂ:

ಇದುವರೆಗೆ ಕೇವಲ ಮನೆ, ನಿವೇಶನ ನಿರ್ಮಾಣಕ್ಕೆ ಸೀಮಿತವಾಗಿದ್ದ ಕೆಎಚ್‌ಬಿ, ಈಗ ದೂರದೃಷ್ಟಿಯನ್ನಿಟ್ಟುಕೊಂಡು 80 ಸಾವಿರ ಆಸನ ಸಾಮರ್ಥ್ಯದ ಬೃಹತ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದ ಸಿಎಂ, “ಗುಜರಾತ್‌ನಲ್ಲಿರುವ ಸ್ಟೇಡಿಯಂ 90 ಸಾವಿರ ಸಾಮರ್ಥ್ಯ ಹೊಂದಿದ್ದು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಈಗ ಸೂರ್ಯನಗರದಲ್ಲಿ ನಿರ್ಮಾಣವಾಗಲಿರುವ ಕ್ರೀಡಾಂಗಣವು ದೇಶದ 2ನೇ ಅತಿ ದೊಡ್ಡ ಸ್ಟೇಡಿಯಂ ಆಗಲಿದ್ದು, ಈ ಭಾಗದ ಆರ್ಥಿಕತೆಗೆ ದೊಡ್ಡ ಶಕ್ತಿ ತುಂಬಲಿದೆ” ಎಂದರು. ಈ ಯೋಜನೆಗೆ ಸರ್ಕಾರದ ಆರ್ಥಿಕ ನೆರವಿಲ್ಲದೆ, ಕೆಎಚ್‌ಬಿ ಸ್ವಂತ ಹಣದಲ್ಲೇ ನಿರ್ಮಾಣ ಮಾಡುತ್ತಿದೆ ಎಂದು ವಸತಿ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡರ ಹೇಳಿಕೆಯನ್ನು ಸಿಎಂ ಉಲ್ಲೇಖಿಸಿದರು.

ಬಡ ಮತ್ತು ಮಧ್ಯಮ ವರ್ಗದವರಿಗೆ ಸೂರು:

“ಖಾಲಿ ಇರುವ ಕೆಎಚ್‌ಬಿ ನಿವೇಶನಗಳ ಮಾರಾಟದಿಂದ ಮಂಡಳಿಗೆ ಸುಮಾರು 20 ಸಾವಿರ ಕೋಟಿ ರೂ. ಆದಾಯ ಬರುವ ಅಂದಾಜಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರುತ್ತಿರುವುದರಿಂದ ಬಡ ಹಾಗೂ ಮಧ್ಯಮ ವರ್ಗದವರ ಕೈಗೆಟುಕುವ ದರದಲ್ಲಿ ಗುಣಮಟ್ಟದ ನಿವೇಶನ ಹಾಗೂ ಮನೆಗಳನ್ನು ಒದಗಿಸಲಾಗುತ್ತಿದೆ. ವಸತಿ ಇಲಾಖೆಯು ಈ ಅವಧಿಯಲ್ಲಿ ರಾಜ್ಯಾದ್ಯಂತ 3 ಲಕ್ಷಕ್ಕೂ ಅಧಿಕ ಮನೆ ಮತ್ತು ನಿವೇಶನಗಳನ್ನು ವಿತರಿಸಿದೆ” ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದರು.

ರಸ್ತೆ ಅಭಿವೃದ್ಧಿಗೆ ಅನುಮೋದನೆ:

ಸೂರ್ಯನಗರ ಹಾಗೂ ಸುತ್ತಮುತ್ತಲಿನ ಭಾಗದ ಸುಗಮ ಸಂಚಾರಕ್ಕಾಗಿ ಜಿಗಣಿ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆಗಳ ನಿರ್ಮಾಣ ಕಾರ್ಯಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಸಿಎಂ ತಿಳಿಸಿದರು. ಈ ಮೂಲಕ ಕ್ರೀಡೆ ಮತ್ತು ಮೂಲಸೌಕರ್ಯದ ಜಂಟಿ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

 

 


Share this with Friends

Related Post