Fri. Jun 5th, 2026

ಬೆಂಗಳೂರು ಮತದಾರರೇ ಗಮನಿಸಿ: ಜೂನ್ 20 ರಿಂದ ಮತದಾರರ ಪಟ್ಟಿ ‘SIR’ ಪ್ರಕ್ರಿಯೆ ಆರಂಭ; ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!

Share this with Friends

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಸಿದ್ಧತೆಗಳು ಆರಂಭವಾಗಿವೆ. ಬೆಂಗಳೂರು ನಗರ, ಕೇಂದ್ರ, ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಹಿರಿಯ ಅಧಿಕಾರಿಗಳ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಜೂನ್ 16 ರೊಳಗೆ ಪೂರ್ವ ಮ್ಯಾಪಿಂಗ್ ಪೂರ್ಣ:

ಮತದಾರರ ಪಟ್ಟಿ ಪರಿಷ್ಕರಣೆಗೂ ಮುನ್ನ ನಡೆಯಬೇಕಾದ ಪೂರ್ವ ಮ್ಯಾಪಿಂಗ್ ಕಾರ್ಯದಲ್ಲಿ ಜೂನ್ 16 ರೊಳಗೆ ಶೇಕಡಾ 100 ರಷ್ಟು ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಯಾವುದೇ ಲೋಪದೋಷಗಳಿಲ್ಲದೆ ಈ ಪ್ರಕ್ರಿಯೆ ನಡೆಸಲು ಪ್ರತಿದಿನ ಪ್ರಗತಿ ಪರಿಶೀಲನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ.

ಕರ್ತವ್ಯ ಲೋಪವೆಸಗುವ ಅಧಿಕಾರಿಗಳಿಗೆ ಕಾನೂನು ಕ್ರಮದ ಎಚ್ಚರಿಕೆ:

ಬೂತ್ ಮಟ್ಟದ ಅಧಿಕಾರಿಗಳ (BLO) ಕೊರತೆಯಿದ್ದರೆ ತಕ್ಷಣವೇ ಹೊಸ ನೇಮಕಾತಿ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಕರ್ತವ್ಯಕ್ಕೆ ಹಾಜರಾಗದ ಬಿಎಲ್‌ಒಗಳಿಗೆ ಕಠಿಣ ನೋಟೀಸ್ ಜಾರಿ ಮಾಡಲು ಮತ್ತು ಅದಕ್ಕೂ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಎಲ್ಲಾ ಬಿಎಲ್‌ಒಗಳು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವಂತೆ ವಿವಿಧ ಇಲಾಖಾ ಮುಖ್ಯಸ್ಥರಿಗೆ ಪತ್ರ ರವಾನಿಸಲು ಆದೇಶಿಸಲಾಗಿದೆ.

ಇಲ್ಲಿದೆ ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ವೇಳಾಪಟ್ಟಿ:

ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕೆಳಗಿನಂತೆ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ:

ಜೂನ್ 20 – 29 : ಪೂರ್ವ ಸಿದ್ಧತೆ, ಸಿಬ್ಬಂದಿಗೆ ತರಬೇತಿ ಹಾಗೂ ನಮೂನೆಗಳ ಮುದ್ರಣ.

ಜೂನ್ 30 – ಜುಲೈ 29 : ಬಿಎಲ್‌ಒಗಳು ಸಾರ್ವಜನಿಕರ ಮನೆ-ಮನೆಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ಪರಿಶೀಲನೆ ನಡೆಸಲಿದ್ದಾರೆ.

ಜುಲೈ 29 : ನಿಗದಿಪಡಿಸಿದ ಮತದಾನ ಕೇಂದ್ರಗಳಲ್ಲಿ ವಿಶೇಷ ಪರಿಶೀಲನಾ ಪ್ರಕ್ರಿಯೆ.

ಆಗಸ್ಟ್ 5 : ಕರಡು ಮತದಾರರ ಪಟ್ಟಿಯ ಅಧಿಕೃತ ಪ್ರಕಟಣೆ.

ಆಗಸ್ಟ್ 5 – ಸೆಪ್ಟೆಂಬರ್ 4 : ಸಾರ್ವಜನಿಕರು ತಮ್ಮ ಹೆಸರು ಸೇರ್ಪಡೆ, ತಿದ್ದುಪಡಿ ಅಥವಾ ಹೆಸರು ತೆಗೆದುಹಾಕಲು ಆಕ್ಷೇಪಣೆ ಸಲ್ಲಿಸಲು ಅವಕಾಶ.

ಆಗಸ್ಟ್ 5 – ಅಕ್ಟೋಬರ್ 3 : ಸಲ್ಲಿಕೆಯಾದ ಆಕ್ಷೇಪಣೆಗಳ ಪರಿಶೀಲನೆ, ನೋಟೀಸ್ ಜಾರಿ ಹಾಗೂ ವಿಲೇವಾರಿ ಕಾರ್ಯ.

ಅಕ್ಟೋಬರ್ 7 : ದೋಷಮುಕ್ತವಾದ ಅಂತಿಮ ಮತದಾರರ ಪಟ್ಟಿಯ ಅಧಿಕೃತ ಪ್ರಕಟಣೆ.

ಈ ಪ್ರಮುಖ ಉನ್ನತ ಮಟ್ಟದ ಸಭೆಯಲ್ಲಿ ವಿಶೇಷ ಆಯುಕ್ತರಾದ ಸುಷ್ಮಾ ಗೋಡಬೋಲೆ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಪೊಮ್ಮಲ ಸುನೀಲ್ ಕುಮಾರ್, ರಮೇಶ್, ಜಗದೀಶ್ ಹಾಗೂ ಕಂದಾಯ ಅಪರ ಆಯುಕ್ತರಾದ ಕವಿತಾ, ರಂಗನಾಥ್, ಪಲ್ಲವಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

 

 


Share this with Friends

Related Post