ಬೆಂಗಳೂರು: ಜಾಲತಾಣಗಳಲ್ಲಿ ಸದ್ಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಸಂಚಾರ ಪೊಲೀಸರೊಬ್ಬರ ಕಾರ್ಯಕ್ಕೆ ಮನಸಾರೆ ಶ್ಲಾಘಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯ ನಡುವೆಯೂ ದಿವ್ಯಾಂಗ ವ್ಯಕ್ತಿಯೊಬ್ಬರನ್ನು ಹೆಗಲ ಮೇಲೆ ಹೊತ್ತು ಸುರಕ್ಷಿತವಾಗಿ ರಸ್ತೆ ದಾಟಿಸುವ ಮೂಲಕ ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಅನಿಲ್ ಕುಮಾರ್ ಅವರು ನಿಜವಾದ ಹೀರೊ ಆಗಿ ಹೊರಹೊಮ್ಮಿದ್ದಾರೆ.
ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಜಂಕ್ಷನ್ ಬಳಿ ಭಾರಿ ಮಳೆಯಿಂದಾಗಿ ರಸ್ತೆಯುದ್ದಕ್ಕೂ ನೀರು ನಿಂತು ಸಾರ್ವಜನಿಕರ ಸಂಚಾರ ದುಸ್ತರವಾಗಿತ್ತು. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಅನಿಲ್ ಕುಮಾರ್ ಅವರು ಸಂಚಾರ ನಿಯಂತ್ರಿಸುತ್ತಿದ್ದರು. ಅದೇ ಸಮಯದಲ್ಲಿ ದಿವ್ಯಾಂಗ ವ್ಯಕ್ತಿಯೊಬ್ಬರು ನೀರು ತುಂಬಿದ ರಸ್ತೆಯನ್ನು ದಾಟಲು ಪರದಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ.
ಹೆಗಲ ಮೇಲೆ ಹೊತ್ತು ರಕ್ಷಣೆ:
ಮೊದಲಿಗೆ ಅನಿಲ್ ಕುಮಾರ್ ಅವರು ಆ ವ್ಯಕ್ತಿಯ ಕೈಹಿಡಿದು ರಸ್ತೆ ದಾಟಿಸಲು ಯತ್ನಿಸಿದರು. ಆದರೆ ಮಳೆಯ ತೀವ್ರತೆ ಹಾಗೂ ರಸ್ತೆಯಲ್ಲಿದ್ದ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಆ ವ್ಯಕ್ತಿಗೆ ನಡೆಯಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮನಗಂಡ ಕಾನ್‌ಸ್ಟೆಬಲ್, ತಕ್ಷಣವೇ ಅವರನ್ನು ತಮ್ಮ ಹೆಗಲ ಮೇಲೆ ಎತ್ತಿಕೊಂಡು ರಸ್ತೆಯ ಮತ್ತೊಂದು ಬದಿಗೆ ಸುರಕ್ಷಿತವಾಗಿ ತಲುಪಿಸಿದ್ದಾರೆ.
ಜಾಲತಾಣಗಳಲ್ಲಿ ಶ್ಲಾಘನೆಯ ಮಹಾಪೂರ:
ಖುದ್ದಾಗಿ ಸ್ಥಳದಲ್ಲಿದ್ದ ಸಾರ್ವಜನಿಕರು ಈ ಹೃದಯಸ್ಪರ್ಶಿ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಕಾನ್‌ಸ್ಟೆಬಲ್ ಅನಿಲ್ ಕುಮಾರ್ ಅವರ ಈ ಕಾರ್ಯಕ್ಕೆ ಪಶ್ಚಿಮ ವಿಭಾಗದ ಸಂಚಾರ ಪೊಲೀಸ್ ಉಪ ಆಯುಕ್ತರು (DCP), ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಸಹಸ್ರಾರು ನಾಗರಿಕರು ಸಲಾಂ ಎನ್ನುತ್ತಿದ್ದಾರೆ.

