ಬೆಂಗಳೂರು:ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ದಿಢೀರ್ ಬೆಳವಣಿಗೆಗಳ ಬೆನ್ನಲ್ಲೇ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗ ಪತ್ರ ಬರೆದು ನೇರ ಪ್ರಶ್ನೆಗಳನ್ನು ಹಾಕಿದ್ದಾರೆ. ರಾಜ್ಯದ 1.14 ಕೋಟಿ ಮಹಿಳೆಯರ ಕೈಸೇರಬೇಕಾಗಿದ್ದ ಗೃಹಲಕ್ಷ್ಮಿ ಯೋಜನೆಯ ಒಟ್ಟು ₹5,000 ಕೋಟಿ ಬಾಕಿ ಹಣದ ಹಣೆಬರಹ ಏನಾಯಿತು ಎಂದು ಅವರು ಸ್ಪಷ್ಟನೆ ಕೇಳಿದ್ದಾರೆ.
ಮಹಿಳೆಯರ ಹಣದ ಸ್ಥಿತಿಗತಿ ಏನಾಯಿತು?
ಮುಖ್ಯಮಂತ್ರಿಯವರ ರಾಜೀನಾಮೆ ನಿರ್ಧಾರವನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸುರೇಶ್ ಕುಮಾರ್, “ತಾವು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ಹೊರಡುವ ಮುನ್ನ ರಾಜ್ಯದ ಕೋಟ್ಯಂತರ ಮಹಿಳಾ ಫಲಾನುಭವಿಗಳಿಗೆ ಸಿಗಬೇಕಾಗಿದ್ದ ಎರಡು ತಿಂಗಳ ಒಟ್ಟು ₹5,000 ಕೋಟಿ ಬಾಕಿ ಮೊತ್ತದ ಬಗ್ಗೆ ನಾಡಿನ ಜನತೆಗೆ ಸತ್ಯ ಸಂಗತಿಯನ್ನು ತಿಳಿಸಬೇಕು” ಎಂದು ಆಗ್ರಹಿಸಿದ್ದಾರೆ.
ಹಣಕಾಸು ಸಚಿವರಾಗಿ ನಿಮ್ಮ ಜವಾಬ್ದಾರಿ ಏನು?
“ರಾಜ್ಯದ ಮುಖ್ಯಸ್ಥರಾಗಿ ಹಾಗೂ ಹಣಕಾಸು ಇಲಾಖೆಯ ಸಚಿವರಾಗಿ ಇಡೀ ಸಾರ್ವಜನಿಕ ಖಜಾನೆಯ ಪೂರ್ಣ ಜವಾಬ್ದಾರಿ ನಿಮ್ಮ ಮೇಲೆಯೇ ಇತ್ತು. ಹೀಗಿರುವಾಗ ಬಡ ಕುಟುಂಬಗಳ ನಿರ್ವಹಣೆಗಾಗಿ ಸರ್ಕಾರವೇ ಗ್ಯಾರಂಟಿ ನೀಡಿದ್ದ ಈ ಬೃಹತ್ ಮೊತ್ತದ ಸಾರ್ವಜನಿಕ ಹಣ ಏನಾಯಿತು? ಇದನ್ನು ಬೇರೆ ಇಲಾಖೆಗಳಿಗೆ ಅಥವಾ ಯೋಜನೆಗಳಿಗೆ ಬಳಸಲಾಗಿದೆಯೇ? ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸುವುದು ನಿಮ್ಮ ಕರ್ತವ್ಯ” ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಿಲ್ಲ
ಹಿಂದಿನ ಬೆಳಗಾವಿ ಅಧಿವೇಶನದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆಯಾಗದ ವಿಷಯದ ಕುರಿತು ಸದನದಲ್ಲಿ ದೊಡ್ಡ ಚರ್ಚೆ ನಡೆದಿತ್ತು. ಆಗ ಸಂಬಂಧಪಟ್ಟ ಸಚಿವರು ತಪ್ಪು ಮಾಹಿತಿ ನೀಡಿ ನಂತರ ಕ್ಷಮೆಯಾಚಿಸಿದ್ದರು. ಆದರೆ, ಇಷ್ಟು ತಿಂಗಳು ಕಳೆದರೂ ಆ ₹5,000 ಕೋಟಿ ಹಣದ ನೈಜ ಸ್ಥಿತಿಗತಿಯ ಬಗ್ಗೆ ಯಾವುದೇ ಪಾರದರ್ಶಕ ಮಾಹಿತಿ ಲಭ್ಯವಾಗಿಲ್ಲ ಎಂದು ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ಅಧಿಕಾರ ಹಸ್ತಾಂತರಿಸುವ ಮುನ್ನವೇ ಈ ಗೊಂದಲಕ್ಕೆ ಅಧಿಕೃತ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

