ಆಳಂದ: ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ, ತಮ್ಮ ಹಾಗೂ ಡಿಕೆಶಿ ನಡುವೆ ವಾಣಿಜ್ಯ ಸಂಬಂಧಗಳಿವೆ ಎಂಬ ವದಂತಿಗಳ ವಿರುದ್ಧ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಗರಂ ಆಗಿದ್ದಾರೆ. ಈ ರೀತಿಯ ಅಪಪ್ರಚಾರ ಮಾಡುವವರ ವಿರುದ್ಧ ಅವರು ಕಟು ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ರಾಜ್ಯ ರಾಜಕೀಯದಲ್ಲಿ ಸಂಪುಟ ಪುನಾರಚನೆ ಹಾಗೂ ನಾಯಕತ್ವ ಬದಲಾವಣೆಯ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿರುವ ಈ ಸಂದರ್ಭದಲ್ಲಿ, ಡಿ.ಕೆ. ಶಿವಕುಮಾರ್ ಮತ್ತು ಬಿ.ವೈ. ವಿಜಯೇಂದ್ರ ನಡುವೆ ಆಂತರಿಕ ಹೊಂದಾಣಿಕೆ ಹಾಗೂ ಬ್ಯುಸಿನೆಸ್ ಪಾಲುದಾರಿಕೆ ಇದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು, “ನಾನು ಹಾಗೂ ಡಿ.ಕೆ. ಶಿವಕುಮಾರ್ ಬ್ಯುಸಿನೆಸ್ ಪಾರ್ಟ್ನರ್ಸ್ ಅಂತ ಯಾರೋ ಮುಠ್ಠಾಳ ಹೇಳುತ್ತಿದ್ದಾನೆ. ಇಂತಹ ಬೇಜವಾಬ್ದಾರಿ ಮತ್ತು ಆಧಾರರಹಿತ ಹೇಳಿಕೆಗಳಿಗೆ ಯಾವುದೇ ಕಿಮ್ಮತ್ತಿಲ್ಲ,” ಎಂದು ನೇರವಾಗಿ ತಳ್ಳಿಹಾಕಿದ್ದಾರೆ.
ರಾಜಕೀಯ ಸಂಚಲನ:
ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿರುವ ಈ ಮಹತ್ವದ ಘಟ್ಟದಲ್ಲಿ ಪ್ರತಿಪಕ್ಷ ಬಿಜೆಪಿಯ ಸಾರಥಿಯಾಗಿ ತಾವು ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡಲು ಸಜ್ಜಾಗುತ್ತಿರುವುದಾಗಿ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಾಯಕರ ನಡುವೆ ಆಂತರಿಕ ಹೊಂದಾಣಿಕೆ ಇದೆ ಎಂಬ ವದಂತಿಗಳನ್ನು ಸಂಪೂರ್ಣವಾಗಿ ನಿರಾಕರಿಸುವ ಮೂಲಕ, ಮುಂಬರುವ ದಿನಗಳಲ್ಲಿ ಸರ್ಕಾರದ ವಿರುದ್ಧ ಕಠಿಣ ರಾಜಕೀಯ ಹೋರಾಟ ಮುಂದುವರಿಸುವ ಮುನ್ಸೂಚನೆಯನ್ನು ಅವರು ನೀಡಿದರು.
ಕಾಂಗ್ರೆಸ್ ಸರ್ಕಾರದಿಂದ ಹಿಂದೂಗಳಿಗೆ ಅವಮಾನ:
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ವಿವಾದಿತ ಲಾಡ್ಲೆ ಮಶಾಕ್ ದರ್ಗಾ ಆವರಣದಲ್ಲಿರುವ ರಾಘವ ಚೈತನ್ಯ ಮಂದಿರದ ಮೇಲೆ ದಾಳಿ ಮಾಡಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಪಾಪಸ್ ಪಡೆದು ಹಿಂದೂಗಳಿಗೆ ಅಪಮಾನ ಮಾಡಿದೆ. ಈ ಸರ್ಕಾರ ಪದೇ ಪದೇ ಇಂತಹುದೇ ತೀರ್ಮಾನ ಕೈಗೊಳ್ಳುತ್ತಿದೆ. ಇದನ್ನು ಬಿಜೆಪಿ ಖಂಡಿಸಲಿದೆ ಎಂದು ಹೇಳಿದರು.
ಸರ್ಕಾರದ ನಡೆ ಖಂಡಿಸಿ ಕಲಬುರಗಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ವಿರುದ್ಧ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಸಿದರು.
ಪದೇ ಪದೇ ಹಿಂದೂಗಳಿಗೆ ಅಪಮಾನ ಮಾಡುತ್ತಿರುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಈ ಸರ್ಕಾರ ಕೇವಲ ಅಲ್ಪಸಂಖ್ಯಾತರ ಓಟಿನಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂದು ಭ್ರಮೆಯಲ್ಲಿದೆ. ಹಿಂದೂ ಭಾವನೆಗಳಿಗ ಧಕ್ಕೆ ತರುವ, ಹಿಂದೂಗಳ ಮತ ಬೇಡವೇ ಬೇಡ ಅನ್ನೋ ಉದ್ದೇಶ ಇದ್ದ ರೀತಿ ಇದೆ. ಇದನ್ನೆಲ್ಲ ನೋಡಿಕೊಂಡು ಕೈ ಕಟ್ಟಿ ಕೂರುವುದಿಲ್ಲ ಎಂದು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲೂ ಕೂಡ ‘ಮೂರಿನ ಕಟ್ಟೆ’ ಮರುನಿರ್ಮಾಣ ವಿಷಯಕ್ಕೆ ಗಲಭೆ ನಡೆದಿತ್ತು. ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಹಿಂದೂ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದರು.
ಯಾರೇ ಸಿಎಂ ಆದರೂ ಅಭಿವೃದ್ಧಿ ಮಾತ್ರ ಇಲ್ಲ
ರಾಜ್ಯದಲ್ಲಿ ಯಾರೇ ಸಿಎಂ ಆದರೂ ಅಭಿವೃದ್ಧಿ ಮಾತ್ರ ನಡೆಯುವುದಿಲ್ಲ. ಕಳೆದ ಮೂರು ವರ್ಷವೂ ಏನೂ ಅಭಿವೃದ್ಧಿ ಕಾರ್ಯ ಆಗಿಲ್ಲ. ಯಾವುದೇ ಹೊಸ ಯೋಜನೆ ಇಲ್ಲ. ಇರುವುದಕ್ಕೆ ಹಣ ನೀಡಿಲ್ಲ. ಈ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂದು ಆರೋಪಿಸಿದರು.
ಗ್ಯಾರಂಟಿಗಳಿಂದ ತನ್ನ ಕೈಯನ್ನು ಸರ್ಕಾರ ಕಟ್ಟಿಕೊಂಡಿದೆ. ಯುವಕರಿಗೆ ಉದ್ಯೋಗ ನೀಡಲಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನ ಇದ್ದರೂ ಮೀಸಲಾತಿ ವಿಚಾರದಲ್ಲಿ ಗೊಂದಲ ಮಾಡಿಕೊಂಡರು. ಹೈಕೋರ್ಟ್ ನಲ್ಲೂ ಸರಿಯಾಗಿ ವಾದ ಮಂಡನೆ ಮಾಡಲಿಲ್ಲ. ಮೀಸಲಾತಿ ಗೊಂದಲದಿಂದಾಗಿ ಲಕ್ಷಾಂತರ ಯುವಕರು ಉದ್ಯೋಗ ವಂಚಿತರಾದರು. ಅವರ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ. ಹೊಸ ಸರ್ಕಾರದಿಂದ ಯಾವುದನ್ನೂ ನಿರೀಕ್ಷಿಸಬೇಡಿ ಎಂದರು.
ಮಕ್ಕಳಲ್ಲಿ ದ್ವೇಷ ಭಾವನೆ ಬಿತ್ತುವ ಕೆಲಸ..
ಶಾಲೆಗಳಲ್ಲಿ ಹಿಜಾಬ್‍ಗೆ ಅವಕಾಶ ನೀಡಿರುವ ಸರ್ಕಾರ ಮಕ್ಕಳಲ್ಲಿ ದ್ವೇಷ ಭಾವನೆ ಬಿತ್ತುತ್ತಿದೆ. ಶಾಲಾ- ಕಾಲೇಜುಗಳಿಗೆ ವಿದ್ಯಾರ್ಜನೆಗೆ ಮಕ್ಕಳು ಬರುತ್ತಾರೆ. ಅಲ್ಲಿ ಒಂದೇ ರೀತಿಯ ಸಮವಸ್ತ್ರ ಇರಬೇಕು. ಅಧಿಕಾರದ ಅಮಲು ಮತ್ತು ಮದದಿಂದ ಏನು ಬೇಕಾದರೂ ತೀರ್ಮಾನ ಮಾಡಬಹುದು ಎಂಬ ಅಹಂನಲ್ಲಿ ಈ ಸರಕಾರ ಇದೆ. ಎಲ್ಲವನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಇಂತಹ ನಾಲಾಯಕ್ ಸರ್ಕಾರಕ್ಕೆ ಜನ ಯಾವಾಗ ಬುದ್ಧಿ ಕಲಿಸಬೇಕೋ ಆಗ ಕಲಿಸುತ್ತಾರೆ ಎಂದು ಹೇಳಿದರು.

