Sat. Jun 6th, 2026

ಕಾರಿನಲ್ಲಿ ಗರ್ಭಿಣಿ ಪತ್ನಿ ಇದ್ದಾಳೆಂದು ನಡುರಸ್ತೆಯಲ್ಲಿ ಯುವಕನ ಗಲಾಟೆ: ಎಚ್‌ಎಎಲ್ ಪೊಲೀಸರ ವಿಚಾರಣೆಯಲ್ಲಿ ಬಯಲಾಯ್ತು ಶಾಕಿಂಗ್ ಟ್ವಿಸ್ಟ್!

Share this with Friends

ಬೆಂಗಳೂರು: ಸಿಲಿಕಾನ್ ಸಿಟಿಯ ಜನ ಸಾಮಾನ್ಯರಿಗೆ ವಿಐಪಿ ಸಂಚಾರದ ಹೆಸರಲ್ಲಿ ಪದೇ ಪದೇ ಎದುರಾಗುವ ಟ್ರಾಫಿಕ್ ಕಿರಕಿರಿಯೇ ಆತನ ತಾಳ್ಮೆ ಕೆಡುವಂತೆ ಮಾಡಿತ್ತು. ರಾಜ್ಯಪಾಲರ ರೂಟ್‌ಗಾಗಿ ರಸ್ತೆ ಬಂದ್ ಮಾಡಿದಾಗ ಎದುರಾದ ತೀವ್ರ ಒತ್ತಡಕ್ಕೆ ಸಿಲುಕಿ, ಪೊಲೀಸರಿಂದ ದಾರಿ ಪಡೆಯಲು ಯುವಕನೊಬ್ಬ ಸುಳ್ಳು ಹೇಳಿ ಹೈಡ್ರಾಮಾ ಮಾಡಿದ ಘಟನೆ ಈಗ ಬೆಳಕಿಗೆ ಬಂದಿದೆ.

ಕೆಲ ದಿನಗಳ ಹಿಂದೆ ಎಚ್‌ಎಎಲ್ ಇಸ್ರೋ ಜಂಕ್ಷನ್‌ನಲ್ಲಿ ರಾಜ್ಯಪಾಲರ ಮೂವ್‌ಮೆಂಟ್‌ಗಾಗಿ ಇಡೀ ರಸ್ತೆಯನ್ನು ಬ್ಲಾಕ್ ಮಾಡಲಾಗಿತ್ತು. ಇದರಿಂದಾಗಿ ಸಾಮಾನ್ಯ ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದರು. ಇದೇ ವೇಳೆ ಮೋಹಿತ್ ಎಂಬ ಯುವಕನೂ ತನ್ನ ಕಾರಿನಲ್ಲಿ ಸಿಲುಕಿಕೊಂಡಿದ್ದನು. ಸುಮಾರು 15 ನಿಮಿಷಗಳ ಕಾಲ ಟ್ರಾಫಿಕ್‌ನಲ್ಲಿ ಕದಲಲಾಗದೆ ನಿಂತಿದ್ದ ಆತನಿಗೆ ಮನೆಯಲ್ಲಿದ್ದ ತನ್ನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದ ತುರ್ತು ಪರಿಸ್ಥಿತಿ ಇತ್ತು. ಆದರೆ ವಿಐಪಿ ಪಾಸ್‌ಗಾಗಿ ಪೊಲೀಸರು ದಾರಿ ಬಿಡದಿದ್ದಾಗ ಯುವಕನ ಸಿಟ್ಟು ನೆತ್ತಿಗೇರಿತ್ತು.

ಒತ್ತಡದಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ ಸವಾರ:

ಟ್ರಾಫಿಕ್‌ನಿಂದ ಹೇಗಾದರೂ ಮಾಡಿ ಹೊರಬರಲೇಬೇಕು ಎಂದು ನಿರ್ಧರಿಸಿದ ಮೋಹಿತ್, ರಸ್ತೆ ಮಧ್ಯದಲ್ಲೇ ಕಾರು ನಿಲ್ಲಿಸಿ ಪ್ರತಿಭಟನೆಗೆ ಇಳಿದಿದ್ದನು. ಪೊಲೀಸರು ತಡೆಯಲು ಬಂದಾಗ, “ನನ್ನ ಕಾರಿನೊಳಗೆ ಗರ್ಭಿಣಿ ಪತ್ನಿ ಇದ್ದಾಳೆ, ತುರ್ತು ಚಿಕಿತ್ಸೆ ಬೇಕು” ಎಂದು ಕಿರುಚಾಡಿ ವಾಗ್ವಾದ ನಡೆಸಿದ್ದನು. ಈ ಹೈಡ್ರಾಮಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು.

ಆದರೆ ಈ ಬಗ್ಗೆ ಎಚ್‌ಎಎಲ್ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ಅಂದು ಕಾರಿನೊಳಗೆ ಯಾವುದೇ ಗರ್ಭಿಣಿ ಮಹಿಳೆ ಇರಲಿಲ್ಲ, ಬದಲಿಗೆ ಆತ ಒಬ್ಬನೇ ಇದ್ದನು. ವಿಐಪಿ ಟ್ರಾಫಿಕ್‌ನಿಂದಾಗಿ ತಡವಾಗುತ್ತಿದ್ದ ಆಕ್ರೋಶ ಮತ್ತು ಮನೆಯಲ್ಲಿದ್ದ ಪತ್ನಿಯ ಬಳಿಗೆ ಬೇಗ ತಲುಪಬೇಕೆಂಬ ತಳಮಳದಲ್ಲಿ ಪೊಲೀಸರು ತಕ್ಷಣವೇ ದಾರಿ ಬಿಡಲಿ ಎಂಬ ಏಕೈಕ ಕಾರಣಕ್ಕೆ ಈ ರೀತಿ ಸುಳ್ಳು ಕಥೆ ಕಟ್ಟಿದ್ದಾಗಿ ಯುವಕ ಒಪ್ಪಿಕೊಂಡಿದ್ದಾನೆ. ಯುವಕನ ಅಸಹಾಯಕತೆ ಮತ್ತು ಲಿಖಿತ ಹೇಳಿಕೆಯನ್ನು ಪಡೆದ ಪೊಲೀಸರು, ಇನ್ನು ಮುಂದೆ ಇಂತಹ ತಪ್ಪು ಮಾಡದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

 


Share this with Friends

Related Post