Fri. Jun 5th, 2026

ನೇಮಕಾತಿ ಪರೀಕ್ಷೆಗಳ ಅಂತಿಮ ಅಂಕಪಟ್ಟಿ ಬಿಡುಗಡೆ: ಕೃಷಿ ಅಧಿಕಾರಿ ಹುದ್ದೆಗೆ ರೈ ವಿವಿ ವಿದ್ಯಾರ್ಥಿಗಳೂ ಅರ್ಹ

Share this with Friends

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿವಿಧ ಇಲಾಖೆಗಳ ಪ್ರಮುಖ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಹತ್ವದ ಫಲಿತಾಂಶ ಹಾಗೂ ತಿದ್ದುಪಡಿ ಪ್ರಕಟಣೆಯನ್ನು ಗುರುವಾರ ಬಿಡುಗಡೆ ಮಾಡಿದೆ.

ಗ್ರೂಪ್ ಎ ಮತ್ತು ಬಿ ಹುದ್ದೆಗಳ ಅಂಕಪಟ್ಟಿ ಪ್ರಕಟ:

ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಾಗೂ ಕೆಎಸ್‌ಎಸ್‌ಐಡಿಸಿ (KSSIDC) ಸಂಸ್ಥೆಗಳ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ವಿವಿಧ ಹುದ್ದೆಗಳಿಗಾಗಿ ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಅಂತಿಮ ಅಂಕಪಟ್ಟಿಯನ್ನು ಪ್ರಾಧಿಕಾರವು ಅಧಿಕೃತವಾಗಿ ಪ್ರಕಟಿಸಿದೆ. ಈ ಅಂಕಪಟ್ಟಿಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ಹಸ್ತಾಂತರಿಸಲಾಗುತ್ತಿದ್ದು, ಆಯಾ ನೇಮಕಾತಿ ಪ್ರಾಧಿಕಾರಗಳು ನಿಯಮಾನುಸಾರ ಶೀಘ್ರದಲ್ಲೇ ಅಂತಿಮ ಆಯ್ಕೆಪಟ್ಟಿಯನ್ನು ಪ್ರಕಟಿಸಲಿವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ತಿಳಿಸಿದ್ದಾರೆ.

ಕೃಷಿ ಅಧಿಕಾರಿ ಹುದ್ದೆ; ವಿದ್ಯಾರ್ಥಿಗಳಿಗೆ ಅರ್ಹತಾ ವಿಸ್ತರಣೆ:

ಕೃಷಿ ಇಲಾಖೆಯ ಮೂಲ ವೃಂದದ 671 ಹಾಗೂ ಕಲ್ಯಾಣ ಕರ್ನಾಟಕ ವೃಂದದ 273 ಬ್ಯಾಕ್‌ಲಾಗ್ ಗ್ರೂಪ್-ಬಿ ವೃಂದದ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಾಧಿಕಾರವು ಪ್ರಮುಖ ಸ್ಪಷ್ಟನೆ ನೀಡಿದೆ. ಯುಜಿಸಿ (UGC) ಮಾನ್ಯತೆ ಪಡೆದಿರುವ ‘ರೈ ಟೆಕ್ನಾಲಜಿ ಯೂನಿವರ್ಸಿಟಿ’ಯಿಂದ ಬಿ.ಎಸ್ಸಿ ಕೃಷಿ (B.Sc Agriculture) ಪದವಿ ಮುಗಿಸಿರುವ ಅಭ್ಯರ್ಥಿಗಳು ಕೂಡ ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ತಿಳಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಹೊರಡಿಸಲಾಗಿದ್ದ ಅಧಿಕೃತ ಅಧಿಸೂಚನೆಯ ಉಳಿದ ನಿಯಮ ಹಾಗೂ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ.

 

 

 


Share this with Friends

Related Post